ಹಾಸ್ಯ ರಾಜಕೀಯ ಆಯುಧ ಇದ್ದಂತೆ

ದಾವಣಗೆರೆ.ಮಾ.೨೦; ಹಾಸ್ಯ ಎಂಬುದು ರಾಜಕೀಯ ಆಯುಧ ಇದ್ದಂತೆ ಎಂದು ಹಿರಿಯ ಪತ್ರಕರ್ತ ಜೋಗಿ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿಂದು ಲೇಖಕ,ಪತ್ರಕರ್ತ ಬಿ.ಎನ್ ಮಲ್ಲೇಶ್ ಅವರ ವಿನೋದ ಬರಹಗಳ ಕೃತಿ ತೆಪರೇಸಿ ರಿಟರ್ನ್ಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದ ಅವರು ಹಾಸ್ಯದ ಮೂಲಕ ಸಮಾಜ ತಿದ್ದುವ ಕೆಲಸವನ್ನು ಬಿ.ಎನ್ ಮಲ್ಲೇಶ್ ಅವರು ತಮ್ಮ ಬರಹಗಳನ್ನು ಕಟ್ಟಿಕೊಟ್ಟಿದ್ದಾರೆ.ಪತ್ರಕರ್ತರು ಹೊಗಳು ಭಟ್ಟರಾಗುತ್ತಿದ್ದಾರೆ ಇಂತಹ  ಕಾಲದಲ್ಲಿ ಹಾಸ್ಯದ ಮೂಲಕ ವ್ಯವಸ್ಥೆಯಲ್ಲಾಗುತ್ತಿರುವುದನ್ನು ಟೀಕಿಸುತ್ತಾ ನವಿರಾದ ಹಾಸ್ಯವನ್ನು ಬಿ.ಎನ್ ಮಲ್ಲೇಶ್ ತೆಪರೇಸಿಯ ಮೂಲಕ ವಿಶ್ಲೇಷಿಸುತ್ತಿದ್ದಾರೆ.ರಾಜಕೀಯ ವ್ಯವಸ್ಥೆಯ ತಪ್ಪುಗಳನ್ನು ಹಾಸ್ಯದೊಂದಿಗೆ ತೊರಿಸಿಕೊಡುತ್ತಿದ್ದಾರೆ.ವಿನೋದವಾಗಿ ಹೇಳುವುದು ಬಹಳಕಾಲ ಉಳಿಯುತ್ತದೆ.ಅದಕ್ಕಾಗಿಯೇ ಲೇಖಕ ಮಲ್ಲೇಶ್ ಅವರು ಎಚ್ಚರಿಕೆಯ ಗಂಟೆ ಎನಿಸುವಂತೆ ಬರಹಗಳನ್ನು ನೀಡಿದ್ದಾರೆ. ಯಾವ ಪ್ರಜೆಯೊಳಗೆ ನೊಂದ ಮತದಾರನು ಇರುತ್ತಾನೊ ಅವನಲ್ಲಿ ವ್ಯವಸ್ಥೆಯ ವಿರುದ್ದ ಸಿಡಿದೇಳು ಮನೋಭಾವನೆ ಇರುತ್ತದೆ.ತೆಪರೇಸಿ ಈ ಕಾಲದ ಪರಿವರ್ತನೆ, ರಾಜಕೀಯ ವ್ಯವಸ್ಥೆ ಶುದ್ದೀಕರಿಸುವ ಚುಚ್ಚುಮದ್ದು ಎನ್ನುವಂತಿದೆ.ತೆಪರೇಸಿ ಮತ್ತಷ್ಟು ವ್ಯವಸ್ಥೆ ಸರಿಪಡಿಸಲಿ ಎಂದು ಶುಭಹಾರೈಸಿದರು.ಬೆಂಗಳೂರಿನ ಬಹುರೂಪಿಯ ಜಿ.ಎನ್ ಮೋಹನ್ ಮಾತನಾಡಿ ತೆಪರೇಸಿ ವಿರೋಧ ಪಕ್ಷದ ನಾಯಕನಿದ್ದಂತೆ.ಸರಳವಾಗಿಯೇ,ಮಾರ್ಮಿಕವಾದ ಪ್ರಶ್ನೆಗಳನ್ನು ತೆಪರೇಸಿ ಹಾಕುತ್ತಾನೆ.ಸಮಾಜದ ಹಾಗೂ  ವ್ಯವಸ್ಥೆಯಹುಳುಕುಗಳನ್ನು ಎತ್ತಿ ತೋರಿಸಿ ಅದನ್ನು ಸರಿಪಡಿಸುವ ಸಾಮಾಜಿಕ ವೈದ್ಯ ತೆರಪೇಸಿ.ಕರ್ನಾಟಕ ಕಂಡ ರಾಜಕೀಯ ವಿಶ್ಲೇಷಕ.ಸಮಾಜದ ಬದಲಾವಣೆಗೆ ಕಾರಣನಾಗುತ್ತಿದ್ದಾನೆ.ಪ್ರಶ್ನೆಗಳನ್ನು ಕೇಳಲು ಹೆದರುವ ಕಾಲ ಇದು ಅಂತಹ ಕಾಲದಲ್ಲಿ ತೆಪರೇಸಿ ಎಲ್ಲಾ ರೀತಿಯ ಪ್ರಶ್ನೆಗಳನ್ನು ಹಾಕುತ್ತಾನೆ.ಲೇಖಕ ಹಾಗೂ ಪತ್ರಕರ್ತ ಬಿ.ಎನ್ ಮಲ್ಲೇಶ್ ಅವರ ಪುಸ್ತಕ ತೆಪರೇಸಿ ರಿಟರ್ನ್ಸ್ ಅವರ ಎಲ್ಲಾ ಬರಹಗಳ ಸಂಕಲನ ರೂಪ.ಮುಂದಿನ ದಿನಗಳಲ್ಲಿ ಬಹುರೂಪಿಯಿಂದ ರಾಜಕೀಯ ವಿಶ್ಲೇಷಣೆ ಮಾಡುತ್ತಿರುವ ಎಲ್ಲಾ ತೆಪರೇಸಿಗಳನ್ನು ಒಂದೆಡೆ ಸೇರಿಸಿ ಹಬ್ಬ ಆಚರಣೆ ಮಾಡಲಾಗುವುದು ಎಂದರು.ಸಮಾರಂಭದಲ್ಲಿ ಪತ್ರಕರ್ತ ಹಾಗೂ ಲೇಖಕ ಬಿ.ಎನ್ ಮಲ್ಲೇಶ್,ವಾಗ್ಮಿ ಕೃಷ್ಣೇಗೌಡ,ಪತ್ರಕರ್ತ ವಿಶಾಖ,ಅನಸೂಯಾ ಮಲ್ಲೇಶ್ ಇದ್ದರು.