ಹಾಸ್ಯ:ಜೀವನೋತ್ಸಾಹಕ್ಕೆ ಸ್ಪೂರ್ತಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಫೆ.25: ನವರಸಗಳಲ್ಲಿ ಒಂದಾದ ಹಾಸ್ಯ,ನಿತ್ಯದ ಬದುಕಿನ ಜಂಜಾಟದಲ್ಲಿ ಒತ್ತಡಗಳನ್ನು ನಿವಾರಿಸಿ, ಉಲ್ಲಸಿತರನ್ನಾಗಿ ಮಾಡಿ ಜೀವನೋತ್ಸಾಹಕ್ಕೆ ಸ್ಪೂರ್ತಿ ನೀಡುವುದೆಂದು ಹರಪನಹಳ್ಳಿಯ ವಿಶ್ರಾಂತ ಪ್ರಾಧ್ಯಾಪಕ ಎಂ.ಪಿ.ಎಂ. ಶಾಂತವೀರಯ್ಯ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಎಸ್ಆರ್ ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಎಂ.ಎಂ. ಪಾಟೀಲ್ ಸ್ಮಾರಕದತ್ತಿ,   ಎಂ.ಪಿ.ಪ್ರಕಾಶ್ ಸ್ಮಾರಕ ದತ್ತಿ, ಎಂ.ಪಿ.ಪ್ರಕಾಶ್ ಸ್ಮರಣಾರ್ಥ ದತ್ತಿ, ಕಂಪ್ಲಿ ತೋಟದ್ದೇವರ ಹಿರೇಮಠದ ಕೊಟ್ರಯ್ಯ ಸ್ಮಾರಕದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ  ‘ಖಾದಿಗ್ರಾಮೋದ್ಯೋಗ, ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ವಿಷಯ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯದ ಪ್ರಾಚೀನ ಗ್ರಂಥಗಳಲ್ಲಿ ಹಾಸ್ಯ ಪ್ರಸಂಗಗಳ ಉಲ್ಲೇಖಗಳಿವೆ. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಹಾಸ್ಯ ಒಡಮೂಡಿದೆ. ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಪ್ರಕಾರದ ಸುವರ್ಣಯುಗ ಪ್ರಾರಂಭವಾದದ್ದು 20ನೇ ಶತಮಾನದಲ್ಲಿ. ಮುದ್ದಣ, ಕುವೆಂಪು, ಪರ್ವತವಾಣಿ, ಟಿ.ಪಿ.ಕೈಲಾಸಂ, ಅ.ರಾ.ಮಿತ್ರ, ನರಸಿಂಹಮೂರ್ತಿ ಹಾಸ್ಯ ಸಾಹಿತ್ಯದಲ್ಲಿ ಹೆಸರುವಾಸಿಯಾಗಿದ್ದಾರೆ. ನಮ್ಮ ಜಿಲ್ಲೆಯ ಹಾಸ್ಯ ಬ್ರಹ್ಮನೆಂದೇ ಹೆಸರಾದ ಬೀಚಿ ಯವರ ಅನೇಕ ಪ್ರಸಂಗಗಳನ್ನು ಉದಾಹರಿಸಿದರು.     ಹಾಸ್ಯ ನಮ್ಮನ್ನು ಮಂದಸ್ಮಿತರನ್ನಾಗಿ ಮಾಡುತ್ತದೆ.ಹಾಸ್ಯ ಪ್ರವೃತ್ತಿ ಇರುವವರ ಸುತ್ತ ದೊಡ್ಡ ಸಮೂಹವೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಗಂಗಾವತಿ ಪ್ರಾಣೇಶ್, ಕೃಷ್ಣೇಗೌಡ, ಇಂದುಮತಿ ಸಾಲಿಮಠ ಅವರ ತಂಡ ಹಾಸ್ಯ ಕ್ಷೇತ್ರದಲ್ಲಿ ಹೆಸರು ಮಾಡಿದೆ ಎಂದರು. ಜನಪದದಲ್ಲಿ ಹಾಸು ಹೊಕ್ಕಾದ ಒಗಟು, ಒಡಪುಗಳನ್ನು ವಿವರಿಸಿ ನಗೆಯುಕ್ಕಿಸಿದರು.      
ದೇಸಿಪ್ರಜ್ಞೆ,ಸ್ವಾವಲಂಬನೆ ಮೂಲಕ ಸ್ವತಂತ್ರ ಚಳುವಳಿಗೆ ಪ್ರೇರಣೆ ನೀಡಿದ್ದು ಖಾದಿ. ಖಾದಿ ಬಟ್ಟೆಯ ಮಹತ್ವವನ್ನು ವಿವರಿಸಿ ಖಾದಿ ಗ್ರಾಮೋದ್ಯೋಗದ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದೆಂದರು. ದತ್ತಿದಾನಿ,ಮಾಜಿ ಕಸಾಪ ಅಧ್ಯಕ್ಷರಾದ ತೋ.ಮ.ಶಂಕ್ರಯ್ಯ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಂಪರೆ ಕುರಿತು ಮಾತನಾಡಿದರು. ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷರಾದ   ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ ಖಾದಿಬಟ್ಟೆ ಸಮಾಜದಲ್ಲಿ ಬಳಕೆಯಾಗುವಂತೆ ಮಾಡಲು ಶ್ರಮಿಸಿದ ಹಡಗಲಿ ಕ್ಷೇತ್ರದ ಪ್ರಥಮ ಶಾಸಕ ಎಂ.ಎಂ.ಪಾಟೀಲರ ಕೊಡುಗೆಯನ್ನು ಸ್ಮರಿಸಿದರು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕಕ್ಷೇತ್ರಗಳಿಗೆ  ಎಂ.ಪಿ.ಪ್ರಕಾಶ್ ರ ಕೊಡುಗೆ ಬಗ್ಗೆ ತಿಳಿಸಿದರು.        
‘ಕಾವ್ಯಪೂರ್ಣಿಮಾ’ ಕವಿಗೋಷ್ಠಿಯನ್ನು ಸಾಹಿತಿ ಪ್ರಕಾಶ ಮಲ್ಕಿಒಡೆಯರ್ ಕವಿತೆ ವಾಚಿಸುವುದರ ಮೂಲಕ ಚಾಲನೆ ನೀಡಿದರು. ಕವಿಗೋಷ್ಠಿಯಲ್ಲಿ ನಾಗಮಂಜುಳ ಜೈನ್, ಶೋಭಾ ಮಲ್ಕಿಒಡೆಯರ್, ಪ್ರವೀಣ ದೈವಜ್ಞಾಚಾರ್ಯ, ಟಿ.ಎಂ.ನಾಗಭೂಷಣ, ಯು.ರೇಣುಕಾ, ಗಂಗಾಧರ ಕೆ.ಎಚ್  ಹಾಗೂ ಮಹಾವಿದ್ಯಾಲಯದ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ಕವನ ವಾಚಿಸಿದರು.  ಇದೇ ಸಂದರ್ಭದಲ್ಲಿ ದತ್ತಿದಾನಿಗಳನ್ನು, ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಕಸಾಪ ಅಧ್ಯಕ್ಷ ಹೆಚ್.ಜಿ. ಪಾಟೀಲ ವಹಿಸಿದ್ದರು. ಸಮಾರಂಭದಲ್ಲಿ ಕಾಲೇಜು ಪ್ರಾಚಾರ್ಯ                 ಎಂ.ವಿಜಯಕುಮಾರ,  ಪ್ರಾಧ್ಯಾಪಕ ಸಿಬ್ಬಂದಿ ವರ್ಗ,ಕಸಾಪ ಗೌರವ ಕಾರ್ಯದರ್ಶಿ ಎ.ಎಂ. ಚನ್ನವೀರಸ್ವಾಮಿ, ಶಿಕ್ಷಕ ಎಂ.ಶಿವಪ್ರಕಾಶ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿ ನೀಲಮ್ಮ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಪಾಟೀಲ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶೈಲಜಾ ವಂದಿಸಿದರು. ಕಾರ್ಯಕ್ರಮವನ್ನು ಪ್ರಾಧ್ಯಾಪಕಿ ಉಮಾ ನಿರ್ವಹಿಸಿದರು.