ಹಾಸ್ಟೇಲ್ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸಲು ಮುಖ್ಯಮಂತ್ರಿಗಳಿಗೆ ಮನವಿ

ವಿಜಯಪುರ, ಜೂ.10-ಹಾಸ್ಟೇಲ್‍ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನ ಹಾಗೂ ಕೋವಿಡ್-19 ರಜೆ ವೇತನ ಪಾವತಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಪ್ರಾಂತ ಸಂಘ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಮಾತನಾಡಿ ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಈ ಮೂರು ಇಲಾಖೆಗಳ ಅಡಿಯಲ್ಲಿರುವ ಸರಕಾರಿ ವಸತಿ ನಿಲಯಗಳಲ್ಲಿ ಮತ್ತು ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಡಾ.ಬಿ.ಆರ್. ಅಂಬೇಡ್ಕರ್, ಇಂದಿರಾಗಾಂಧಿ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು ಈ ಹಿಂದೆ ಸೇವೆ ಸಲ್ಲಿಸಿದ ಮೂರು-ನಾಲ್ಕು ತಿಂಗಳ ಬಾಕಿ ವೇತನ ಪಾವತಿಸಿರುವದಿಲ್ಲ. 2020 ಮಾರ್ಚ ತಿಂಗಳಿಂದ ಇಲ್ಲಿಯವರೆಗೆ ಕೊರೋನಾ ಹಾವಳಿಯಿಂದ ವಸತಿ ನಿಲಯಗಳು 3-4 ತಿಂಗಳು ಮಾತ್ರ ಪ್ರಾರಂಭಿಸಿದ್ದು, ಕಳೆದ 11 ತಿಂಗಳು ವಸತಿ ನಿಲಯಗಳು ಬಂದ್ ಇದ್ದರಿಂದ ದುಡಿಯಲು ಕೆಲಸವಿಲ್ಲದೆ ಹೊರಗುತ್ತಿಗೆ ನೌಕರರು ಅತ್ಯಂತ ಸಂಕಷ್ಟದಲ್ಲಿ ಉಪವಾಸ-ವನವಾಸ ಕಾಲ ಕಳೆಯುವಂತಾಗಿದೆ. ಸರಕಾರವು ಈ ಕಾರ್ಮಿಕರಿಗೆ ಕಳೆದ ವರ್ಷ ಲಾಕಡೌನ್ ರಜೆ ವೇತನ ಕೊಡುವುದಾಗಿ ಆಶ್ವಾಸನೆ ನೀಡಿ ಇಲ್ಲಿಯವರೆಗೆ ವೇತನ ಪಾವತಿಸಿಲ್ಲ ಆದ್ದರಿಂದ ಬಾಕಿ ವೇತನವನ್ನು ಹಾಸ್ಟೇಲ್ ನೌಕರರಿಗೆ ಪಾವತಿಸಬೇಕೆಂದು ಆಗ್ರಹಪಡಿಸಿದರು.
ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷರಾದ ಹುಲಗಪ್ಪ ಎಚ್. ಚಲವಾದಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ 2019 ರಲ್ಲಿ ನೇಮಕಾತಿಯಿಂದ ಕೆಲಸ ಕಳೆದುಕೊಂಡ ನೌಕರರಿಗೆ ಹೊಸದಾಗಿ ಪ್ರಾರಂಭಿಸುವ ವಸತಿ ನಿಲಯಗಳಲ್ಲಿ ಸೇವೆಯಲ್ಲಿ ಮುಂದುವರೆಸುವುದಾಗಿ ಸರಕಾರ ಒಪ್ಪಿಕೊಂಡಿದ್ದು, ಆದರೆ ಈ ನೌಕರರು ಕೂಡಾ ದುಡಿಯಲು ಕೆಲಸವಿಲ್ಲದೆ ಪರದಾಡುವಂತಾಗಿದೆ. ಆ ಹೊರಗುತ್ತಿಗೆ ನೌಕರರಿಗೂ ಲಾಕಡೌನ್ ರಜೆ ವೇತನ ಪಾವತಿಸಬೇಕೆಂದು ಒತ್ತಾಯಿಸುವುದರೊಂದಿಗೆ ಹಾಸ್ಟೇಲ್ ಹೊರಗುತ್ತಿಗೆಯಾಗಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಪ್ಯಾಕೇಜ್ ಘೋಷಿಸಬೇಕು. ಹಾಸ್ಟೇಲ್ ಹೊರಗುತ್ತಿಗೆ ನೌಕರರ 3-4 ತಿಂಗಳ ಬಾಕಿ ವೇತನ ಪಾವತಿಸಬೇಕು. ಕಳೆದ ವರ್ಷದ ಕೋವಿಡ್-19 ರಜೆ ವೇತನ ಮತ್ತು ವರ್ಷದ ಒಟ್ಟು ಆರು ತಿಂಗಳ ವೇತನ ಪಾವತಿಸಬೇಕು. 2019 ರಲ್ಲಿ ನೇರ ನೇಮಕಾತಿಯಿಂದ ಕೆಲಸ ಕಳೆದುಕೊಂಡ ನೌಕರರಿಗೆ ಹೊಸದಾಗಿ ಪ್ರಾರಂಭಿಸುವ ವಸತಿ ನಿಲಯಗಳಲ್ಲಿ ಸೇವೆಯಲ್ಲಿ ಮುಂದುವರೆಸಬೇಕು. ಅಲ್ಲದೇ ಈ ನೌಕರರಿಗೂ ಕೋವಿಡ್-19 ರ ಲಾಕಡೌನ್ ರಜೆ ವೇತನ ಪಾವತಿಸಬೇಕು. ಐದು ವರ್ಷಗಳ ಸೇವೆ ಸಲ್ಲಿಸಿದ ಹಾಸ್ಟೇಲ್ ಹೊರಗುತ್ತಿಗೆ ನೌಕರರಿಗೆ ಕ್ಷೇಮಾಭಿವೃದ್ದಿ ಯೋಜನೆಯಲ್ಲಿ ನೇಮಕಾತಿ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಮನಪ್ಪ ಬಜಂತ್ರಿ, ಬೇಬಿ ಹೊಸಮನಿ, ಲಕ್ಷ್ಮೀ ಮಂಗಸೂಳಿ, ರಾಮವ್ವ ಬಜಂತ್ರಿ, ಶಬಾನಾ ನದಾಫ, ಬೇಗಂ ನದಾಫ, ಸುಜಾತಾ ಕೂಡಗಿ,ಪ್ರೇಮಾ ದರ್ಬಿ, ಸುಮಿತ್ರಾ ತಳವಾರ, ಅನಸೂಯಾ ಬಡಿಗೇರ, ಲಕ್ಷ್ಮೀಬಾಯಿ ಚವ್ಹಾಣ, ಸುನಂದಾ ಪವಾರ, ರೇಖಾ ದೊಡಮನಿ, ಮೀನಾಕ್ಷಿ ರಾಠೋಡ, ಯಾಸ್ಮೀನ ಹಿಪ್ಪರಗಿ, ಇನ್ನಿತರರು ಉಪಸ್ಥಿತರಿದ್ದರು.