(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.25: ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆಸಿ, ನಂತರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದೆ.
ಬೇಡಿಕೆಗಳು
ಮನವಿ ಪತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳ ಹಾಸ್ಟೆಲ್‍ಗಳಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ಕಾರ್ಮಿಕರಿಗೆ ಇಲಾಖೆಯ ಪರಿಷ್ಕೃತ ವೇತನದ ಸರ್ಕಾರದ ಆದೇಶವನ್ನು (ನವೆಂಬರ್ 30, 2022) ಕೂಡಲೆ ಜಾರಿಗೆ ತರಬೇಕು. ಡಿಸೆಂಬರ್ 2022ರಿಂದ ಜೂಲೈ 2023ರವರೆಗೆ ಹೆಚ್ಚಿಸಿದ ವೇತನದ ಹಿಂಬಾಕಿ ಎಲ್ಲಾ ವಸತಿ ನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಗೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಹಿಂದಿನ ಏಜೆನ್ಸಿಗಳಿಂದ ಬರಬೇಕಾದ ಪಿ.ಎಪ್ ಹಣವನ್ನು ವಸೂಲಿ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು, ನಿಗದಿತವಾಗಿ ಪಿ.ಎಫ್ ಹಣ ಹಾಕುವಂತೆ ಈಗಿರುವ ಏಜೆನ್ಸಿಗಳಿಗೆ ತಾಕೀತು ಮಾಡಬೇಕು, ಹೊರಗುತ್ತಿಗೆ ಕಾರ್ಮಿಕರಿಗೆ ತಿಂಗಳ ಮೊದಲ ವಾರದಲ್ಲಿ ವೇತನ ನೀಡಬೇಕು ಹಾಗೂ ಈ ಕಾರ್ಮಿಕರು ಕನಿಷ್ಠ ವೇತನದಿಂದ ವಂಚಿತರಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು, ಕಾರ್ಮಿಕ ಕಾಯ್ದೆ ಅನ್ವಯ ತಿಂಗಳಿಗೆ 4 ರಜಾ ಸೌಲಭ್ಯಗಳು, ನೇಮಕಾತಿ ಆದೇಶ, ಗುರುತಿನ ಚೀಟಿ, ವೇತನ ಚೀಟಿ (ಪೇಮೆಂಟ್ ಸ್ಲಿಪ್), ಇಎಸ್‍ಐ ಕಾರ್ಡ್ ನೀಡಬೇಕು. ರಜೆಯ ದಿನ ಕಾರ್ಯನಿರ್ವಹಿಸಿದರೆ ದುಪ್ಪಟ್ಟು ವೇತನ ನೀಡಬೇಕು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳ ಹಾಸ್ಟೆಲ್‍ಗಳಿಂದ ವಜಾಗೊಂಡ ಹೊರಗುತ್ತಿಗೆ ಕಾರ್ಮಿಕರನ್ನು ಮರು ಸೇರ್ಪಡೆಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ
ಮನವಿಪತ್ರ ಸಲ್ಲಿಸಿದ ಸಂದರ್ಭದಲ್ಲಿ ಕಾ.ದೇವದಾಸ್, ಡಾ.ಪ್ರಮೋದ್, ಸುರೇಶ್, ಮುರಳಿ ಕೃಷ್ಣ, ಜಯರಾಂ, ಲಕ್ಷ್ಮಿ ಮುಂತಾದವರು ನೇತೃತ್ವ ವಹಿಸಿದ್ದರು.