ಹಾಸ್ಟೆಲ್ ವಿದ್ಯಾರ್ಥಿಗಳ ಗಂಟಲ ದ್ರವ ಮಾದರಿಯ ಪರೀಕ್ಷೆ

ಮಂಗಳೂರು, ಜ.೫- ನಗರದ ಕೊಟ್ಟಾರ ಚೌಕಿಯ ಅಪಾರ್ಟ್‌ಮೆಂಟ್‌ನಲ್ಲಿ ಹಾಸ್ಟೆಲ್ ಹೊಂದಿರುವ ನರ್ಸಿಂಗ್ ಕಾಲೇಜೊಂದರ ೬ ಮಂದಿ ಕೇರಳ ಮೂಲದ ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್ ಕಂಡುಬಂದ ಬೆನ್ನಲ್ಲೇ ಅಲ್ಲಿರುವ ಎಲ್ಲ ವಿದ್ಯಾರ್ಥಿಗಳು ಸೇರಿ ಇತರ ಸಿಬ್ಬಂದಿಯನ್ನೂ ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿರುವ ಜಿಲ್ಲಾ ಆರೋಗ್ಯ ಇಲಾಖೆ, ಅವರೆಲ್ಲರ ಗಂಟಲ ದ್ರವ ಮಾದರಿಯನ್ನು ಪಡೆದುಕೊಂಡಿದೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕದಲ್ಲಿರುವುದರಿಂದ ಎಲ್ಲ ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿ ಸಹಿತ ೬೮ ಮಂದಿಯ ಮಾದರಿಯನ್ನು ಪಡೆದುಕೊಳ್ಳಲಾಗಿದ್ದು, ಮಂಗಳವಾರ ವರದಿ ನಿರೀಕ್ಷೆ ಮಾಡಲಾಗಿದೆ. ಪಾಸಿಟಿವ್ ವಿದ್ಯಾರ್ಥಿಗಳನ್ನು ಅದೇ ಹಾಸ್ಟೆಲ್‌ನ ಒಂದು ಮಹಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರೆ, ಉಳಿದ ವಿದ್ಯಾರ್ಥಿಗಳಿಗೆ ಇನ್ನೊಂದು ಅಂತಸ್ತಿನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಏಳು ದಿನ ಗಳ ಬಳಿಕ ಮತ್ತೆ ಎಲ್ಲ ಪ್ರಾಥಮಿಕ ಸಂಪರ್ಕಿತರ ಪರೀಕ್ಷೆ ನಡೆಸಲಾಗುವುದು ಎಂದು ಕೋವಿಡ್-೧೯ ಜಿಲ್ಲಾ ನೋಡಲ್ ಅಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ. ಇದಕ್ಕೂ ಮೊದಲು ೭೮ ಕೊರೋನ ಪಾಸಿಟಿವ್ ಕಂಡು ಬಂದ ಬೇರೆ ಎರಡು ನರ್ಸಿಂಗ್ ಕಾಲೇಜುಗಳಲ್ಲಿ ಹೊಸದಾಗಿ ಯಾವ ವಿದ್ಯಾರ್ಥಿಗೂ ಕೊರೋನ ದೃಢಪಟ್ಟಿಲ್ಲ. ಅಲ್ಲಿರುವ ಎಲ್ಲ ೭೪೩ ವಿದ್ಯಾರ್ಥಿಗಳ ಮಾದರಿಯನ್ನು ಮತ್ತೆ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಬ್ರಿಟನ್‌ನಿಂದ ಮಂಗಳೂರಿಗೆ ಬಂದಿರುವ ೧೧೮ ಮಂದಿಯಲ್ಲಿ ಇಬ್ಬರ ವರದಿ ಬರಲು ಇನ್ನೂ ಬಾಕಿಯಿದೆ. ಇದುವರೆಗೆ ತಾಯ್ನಿಡಿಗೆ ಆಗಮಿಸಿದ ಯಾರಲ್ಲೂ ರೂಪಾಂತರಿತ ವೈರಸ್ ಇರುವ ವರದಿ ಬಂದಿಲ್ಲ ಎಂದು ಡಾ.ಅಶೋಕ್ ತಿಳಿಸಿದ್ದಾರೆ.