ಹಾಸ್ಟೆಲ್ ಮೇಲೆ ದಾಳಿ: ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಸಂಘದಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.4- ಮಂಡ್ಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿನಿಲಯದ ಮೇಲೆ ದಾಳಿ ಹಾಗೂ ಸಂಗೊಳ್ಳಿರಾಯಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರಯುಳ್ಳ ಪ್ಲೆಕ್ಸ್ ಗಳನ್ನು ಹಾನಿ ಮಾಡಿರುವವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಕುರುಬರ ಸಂಘದ ಆಶ್ರಯದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಕುರುಬರ ಸಂಘಗಳು, ಸಂಗೊಳ್ಳಿರಾಯಣ್ಣ ಯವ ವೇದಿಕೆ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗ, ಜಿಲ್ಲಾ ಅಹಿಂದ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಂಜೇಗೌಡ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ನಂಜೇಗೌಡ ಮಾತನಾಡಿ, ಮಂಡ್ಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿನಿಲಯಕ್ಕೆ ಕಿಡಿಗೇಡಿಗಳು ಅತಿಕ್ರಮವಾಗಿ ಪ್ರವೇಶಿಸಿ ಕಿಟಕಿ ಬಾಗಿಲುಗಳ ಗಾಜನ್ನು ಪುಡಿಪುಡಿ ಮಾಡಿ ಸಂಗೊಳ್ಳಿರಾಯಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರಯುಳ್ಳ ಪ್ಲೆಕ್ಸ್ ಗಳಿಗೆ ಹಾನಿ ಮಾಡಿರುವವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆರಗೋಡು ಗ್ರಾಮದಲ್ಲಿ ಧ್ವಜ ಸ್ತಂಭದ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರ ನೇತೃತ್ವದ ಪ್ರತಿಭಟನಾಕಾರರು ಬೆಂಗಳೂರು ಮತ್ತು ಮೈಸೂರು ಮುಖ್ಯ ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಯಾರದೋ ಕುಮ್ಮಕ್ಕಿನಿಂದ ಕಿಟಕಿ ಭಾಗಿಲುಗಳ ಗಾಜಗಳನ್ನು ಪುಡಿಪುಡಿ ಮಾಡಿರುವುದಲ್ಲದೆ ಅಲ್ಲಿ ಹಾಕಿದಸಂಗೊಳ್ಳಿರಾಯಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರಯುಳ್ಳ ಪ್ಲೆಕ್ಸ್ ಗಳನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಸಹೋದರರಂತೆ ಜೀವನ ಸಾಗಿಸುತ್ತಿದ್ದ ಮಂಡ್ಯ ನಾಗರಿಕರ ಬದುಕಿನಲ್ಲಿ ಕೋಮುದಳ್ಳುರಿಯ ವಿಷಬೀಜ ಬಿತ್ತಿ ಜಾತಿ ಸಂಘರ್ಷಕ್ಕೆ ದಾರಿ ಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ. ಈ ಒಂದು ಘಟನೆಯು ರಾಜ್ಯಾದ್ಯಂತ ಇರುವ ಹಿಂದುಳಿದ ವರ್ಗದ ಕುರುಬ ಸಮುದಾಯಕ್ಕೆ ಅತ್ಯಂತ ನೋವು ಉಂಟಾಗಿದೆ. ಆದರಿಂದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಂಜೇಗೌಡ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಶಿವಲಿಂಗೇಗೌಡ, ಉಪಾದ್ಯಕ್ಷರಾದ ನಟರಾಜು ಬಸಪ್ಪಪಾಳ್ಯ, ಪಾಪಣ್ಣೇಗೌಡ, ತಾಲೂಕು ಸಂಘದ ಆರ್.ಉಮೇಶ್ ಎಸ್‍ಪಿಕೆ, ಮಾಜಿ ಅಧ್ಯಕ್ಷ ಜನ್ನೂರುಮಹದೇವು, ಗೌರವ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಕೆ.ಪಿ.ನಾಗರಾಜು, ಮಾಜಿ ಉಪಾಧ್ಯಕ್ಷ ಮಾದಾಪುರ ರವಿಕುಮಾರ್, ಎಪಿಎಂಸಿ ನಿರ್ದೇಶಕ ಗುರುಸ್ವಾಮಿ, ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಬೆಳ್ಳೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕುರುಬರ ಸೊತ್ತನಹುಂಡಿ ಸೋಮಣ್ಣ, ಕುದೇರುಲಿಂಗಣ್ಣ, ಕೊಳ್ಳೇಗಾಲ ತಾಲೂಕು ಸಂಘದ ಅಧ್ಯಕ್ಷ ರಾಚೇಗೌಡ, ಯಳಂದೂರು ತಾಲೂಕು ಕೊಂಡೇಗೌಡ, ಪ್ರದೇಶ ಕುರುಬರ ಸಂಘದ ನಿರ್ದೇಶಕ ಹನೂರು ಪುಟ್ಟಸ್ವಾಮಿ, ಮಸಗಾಪುರ ಸ್ವಾಮಿ, ಹಾಲಹಳ್ಳಿ ಸೋಮಶೇಖರ್, ಪಿ.ರಾಮಸ್ವಾಮಿ, ಬಿ.ಸ್ವಾಮಿ, ಮಹೇಶ್, ರೇವಣ್ಣ, ಕುಮಾರ್ ಇತರರು ಭಾಗವಹಿಸಿದ್ದರು.