ಹಾಸ್ಟೆಲ್ ನೌಕರರ ಸೇವಾ ಭದ್ರತೆಗೆ ಆಗ್ರಹಿಸಿ ಅನಿರ್ಧಿಷ್ಟ ಧರಣಿ ಆರಂಭ

ಕಲಬುರಗಿ.ಮೇ.24: ಹಾಸ್ಟೆಲ್ ನೌಕರರಿಗೆ ಸೇವಾ ಭದ್ರತೆ ಕೊಡುವಂತೆ, ಮ್ಯಾನ್ ಪವರ್ ಏಜೆನ್ಸಿಗಳು ನಡೆಸುತ್ತಿರುವ ಭ್ರಷ್ಟಾಚಾರ ತಡೆಯುವಂತೆ, ಬಾಕಿ ವೇತನ ಪಾವತಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸೇವಾ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭಗೊಂಡಿತು.
ಪ್ರತಿಭಟನೆಕಾರರು ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಹಾಸ್ಟೆಲ್‍ಗಳಲ್ಲಿ ಐದು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವಂತೆ, ಸುಪ್ರಿಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡುವಂತೆ, ಹೊರಗುತ್ತಿಗೆ ಎಂಬ ಜೀತ ಪದ್ದತಿ ಕೈಬಿಟ್ಟು ಇಲಾಖೆಯಿಂದಲೇ ವೇತನ ಪಾವತಿಸುವಂತೆ, ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಬಾಕಿ ಇರುವ ವೇತನ ಕೂಡಲೇ ಪಾವತಿಸುವಂತೆ ಒತ್ತಾಯಿಸಿದರು.
ಪ್ರತಿ ತಿಂಗಳು ಐದರೊಳಗೆ ವೇತನ ಪಾವತಿಸುವಂತೆ, ಈ ಹಿಂದೆ ಕೆಲಸ ಕಳೆದುಕೊಂಡ ನೌಕರರಿಗೆ ಹೊಸದಾಗಿ ಪ್ರಾರಂಭವಾದ ವಸತಿ ನಿಲಯಗಳಲ್ಲಿ ಖಾಲಿಯಾದ ಸ್ಥಳಗಳಲ್ಲಿ ಪುನ: ಸೇವೆಯಲ್ಲಿ ಮುಂದುವರೆಸುವಂತೆ, ನೌಕರರ ಪ್ರತಿ ವರ್ಷವೂ ಮ್ಯಾನ್ ಪವರ್ ಏಜೆನ್ಸಿಯಿಂದ ತಾತ್ಕಾಲಿಕ ನೇಮಕಾತಿ ಆದೇಶ ಕಡ್ಡಾಯವಾಗಿ ಕೊಡುವಂತೆ, ಈ ಹಿಂದೆ ಕೊಡಲಾರದ ಏಜೆನ್ಸಿಗಳಿಗೆ ಕೊಡುವಂತೆ ಆದೇಶಿಸುವಂತೆ, ನೌಕರರಿಗೆ ವಾರಕ್ಕೊಂದು ರಜೆ ತಪ್ಪದೇ ಕೊಡುವಂತೆ, ಅಲ್ಲದೇ ಹೆರಿಗೆ ರಜೆ ಮತ್ತು ಭತ್ಯೆ ಕೊಡುವಂತೆ, 2023ರ ಏಪ್ರಿಲ್ ಒಂದರಿಂದ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಜಾರಿಗೆ ತರುವಂತೆ, ಈ ಹಿಂದೆ ಕಾರ್ಮಿಕರಿಗೆ ಮೋಸ ಮಾಡಿದ ಕೌಶಲ್ಯ, ತನುಶ್ರೀ ಏಜೆನ್ಸಿಯಿಂದ ಇಪಿಎಫ್ ಹಣ ಕಟ್ಟಿಸುವಂತೆ, ಅಲ್ಲದೇ ತಾತ್ಕಾಲಿಕ ನೇಮಕಾತಿ ಆದೇಶ ಕೊಡುವಂತೆ ಅವರು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು 1000ರಿಂದ 2000ರೂ.ಗಳ ಎರಡು ವರ್ಷಗಳ ಕಾಲ ಕಡಿಮೆ ವೇತನ ಪಾವತಿಸಿದ ಶಾರ್ಪ್ ಏಜೆನ್ಸಿ ಮೇಲೆ ಕಠಿಣ ಕ್ರಮ ಜರುಗಿಸಿ ವ್ಯತ್ಯಾಸದ ಹಣ ಪಾವತಿಸಲು ಕ್ರಮ ಕೈಗೊಳ್ಳುವಂತೆ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಆಹಾರ ಕೊಡಲು ಪ್ರತಿ ವಿದ್ಯಾರ್ಥಿಗೆ 100ರೂ.ಗಳನ್ನು ಮಂಜೂರು ಮಾಡುವಂತೆ ಅವರು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆ. ಹಣಮೇಗೌಡ, ಸೈಯದ್ ಇಸಾಮುದ್ದೀನ್ ದಿರಾಸಾಬ್, ಅಣ್ಣಬಸಪ್ಪ ಪೋತೆ, ಪವನ್ ಹುಮ್ನಾಬಾದ್, ಮಹೇಶ್ ಕಾಟೆ, ದಾವಲಸಾಬ್ ನದಾಫ್, ವೆಂಕಟೇಶ್ ಗುತ್ತೇದಾರ್, ಮಲ್ಲಮ್ಮ ಐಕೂರ್, ಆನಂದ್ ಹಾದಿಮನಿ, ರಾಜು ಯಾದವಾಡ್, ಮೇಘರಾಜ್ ಕಠಾರೆ, ವಿ ಶಿರಸಿ, ಸುರೇಶ್ ದೊಡ್ಡಮನಿ, ಸಿದ್ದಮ್ಮ ಹಳ್ಳಿಖೇಡ್, ಪರಶುರಾಮ್ ಜಿ., ಭಾಗಣ್ಣ, ನರಸಮ್ಮ ಮುಂತಾದವರು ಪಾಲ್ಗೊಂಡಿದ್ದರು.