ಹಾಸ್ಟೆಲ್ ನೌಕರರಿಗೆ ಕನಿಷ್ಠ ವೇತನ ನೀಡಿ

ದೇವದುರ್ಗ,ಜೂ.೨೧-
ವಿವಿಧ ಇಲಾಖೆಯಡಿ ನಡೆಯುತ್ತಿರುವ ಹಾಸ್ಟೆಲ್ ಹಾಗೂ ವಸತಿ ಶಾಲೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಕನಿಷ್ಠ ೧೯ಸಾವಿರ ರೂ. ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಪಂ ಕಚೇರಿ ಮುಂದೆ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ (ಸಿಐಟಿಯು ಸಂಯೋಜಿತ) ಪ್ರತಿಭಟನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗ ಮತ್ತು ಪಂಗಡಗಳ ಇಲಾಖೆ, ಅಲ್ಪಸಂಖ್ಯಾತರ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಯುತ್ತಿರುವ ಹಾಸ್ಟೆಲ್‌ನಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರರು ೧೫ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು.
ಸಿ, ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗೆ ನಿವೃತ್ತಿವರೆಗೆ ಸೇವಾಭದ್ರತೆ ಕೊಡಬೇಕು. ಏ.೧ರಿಂದ ಅನ್ವಯವಾಗುವಂತೆ ಕನಿಷ್ಠ ವೇತನವನ್ನು ಬ್ಯಾಂಕ್ ಖಾತೆಗೆ ಜಮಾಮಾಡಬೇಕು. ವಾರದ ರಜೆ, ಸಂಬಳದ ಚೀಟಿ, ಇಎಸ್‌ಐ ಕಾರ್ಡ್, ಪಿಎಫ್‌ಗೆ ಹಣತುಂಬಿದ ರಶಿದಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಮಾಡಿದ ಆದೇಶ ವಾಪಸ್ ಪಡೆಯಬೇಕು. ಬಿಸಿಎಂ ಇಲಾಖೆ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಸಿಬ್ಬಂದಿ ನೇಮಕ ಮಾಡಬೇಕು. ಕೆಲಸದ ಸಮಯ ನಿಗದಿಮಾಡಿ ಬಾಕಿವೇತನ ಕೊಡಬೇಕು.
ನೇರನೇಮಕದಲ್ಲಿ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ಮತ್ತೆ ನೇಮಕ ಮಾಡಿಕೊಳ್ಳಬೇಕು. ಬಿಸಿಎಂ ಇಲಾಖೆ ಹಾಸ್ಟೆಲ್‌ಗಳಿಗೆ ಕಾವಲುಗಾರರನ್ನು ನೇಮಿಸಬೇಕು. ನೌಕರರಿಗೆ ವಾರ್ಡನ್, ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು. ಸಮಸ್ಯೆ ಪರಿಹಾರಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷೆ ರೇಣುಕಾ, ಕಾರ್ಯದರ್ಶಿ ಮಾರೆಪ್ಪ, ಗೌರವಾಧ್ಯಕ್ಷ ಗಿರಿಯಪ್ಪ ಪೂಜಾರಿ, ಶಂಕರಗುರು ಗಣೇಕಲ್, ಸಾಬಣ್ಣ, ಪಾರ್ವತಿ, ಫಾತಿಮಾ, ರೇಣುಕಾ ಆಲ್ಕೋಡ್, ಸುವರ್ಣ ಇತರರಿದ್ದರು.