ಹಾಸ್ಟೆಲ್ ತೊರೆಯುತ್ತಿರುವ ವಿದ್ಯಾರ್ಥಿಗಳು ಸೋಂಕಿನ ಭೀತಿ

ಬೆಂಗಳೂರು/ಧಾರವಾಡ ಏ.೧೮- ರಾಜಧಾನಿ ಬೆಂಗಳೂರು ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಊರು ಸೇರಿಕೊಳ್ಳುತ್ತಿದ್ದಾರೆ.
ಬದುಕಿದ್ದರೆ ಬಂದು ಪರೀಕ್ಷೆ ಬರೆಯುತ್ತೇವೆ ಎಂದು ವಿವಿ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯ ತೊರೆಯುತ್ತಿದ್ದು ತಮ್ಮ ತಮ್ಮ ಊರುಗಳಿಗೆ ಮುಖ ಮಾಡುತ್ತಿದ್ದಾರೆ.
ವಿದ್ಯಾಕಾಶಿ ಧಾರವಾಡದಲ್ಲಿ ಎಗ್ಗಿಲ್ಲದೇ ಕೊರೊನಾ ಸೊಂಕು ಬೆಂಬಿಡದೇ ಬೆನ್ನತ್ತಿದೆ. ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚು ಕಂಡು ಬರುತ್ತಿರುವುದರಿಂದ ಆತಂಕಕ್ಕೆ ಎಡೆ ಮಾಡಿದೆ.
ಧಾರವಾಡದ ಗೌರಿಶಂಕರ ಹಾಗೂ ಕಾವೇರಿ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳಲ್ಲಿ ಸೋಂಕು ದೃಢವಾದ ಕಾರಣ ಉಳಿದ ವಿದ್ಯಾರ್ಥಿಗಳು ಭಯದಿಂದ ತಮ್ಮೂರಿನತ್ತ ತೆರಳುತ್ತಿದ್ದಾರೆ.
ಕಳೆದ ವಾರವಷ್ಟೇ ಧಾರವಾಡದ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ೧೫ ಹಾಗೂ ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ೧೫ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಂಡು ಬಂದಿತ್ತು. ಸೋಂಕು ಪತ್ತೆಯಾಗುತ್ತಿದಂತೆ ಸಂಸ್ಥೆಯ ಆಡಳಿತ ಮಂಡಳಿ ಒಂದು ವಾರ ಸ್ವಯಂ ಬಂದ್ ಘೋಷಣೆ ಮಾಡಿ ಕಾಲೇಜ್ ಸಹ ಸ್ಯಾನಿಟೈಸರ್ ಮಾಡಿಸಲಾಗಿತ್ತು.
ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಧಾರವಾಡದ ಸಪ್ತಾಪೂರದಲ್ಲಿರುವ ಗೌರಿ ಶಂಕರ ಹಾಸ್ಟೆಲಿನ ೨೫, ಕೆಸಿಡಿ ಕಾಲೇಜಿನಲ್ಲಿರುವ ಕಾವೇರಿ ಹಾಸ್ಟೆಲ್ ನಲ್ಲಿ ೭ ಹಾಗೂ ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ೧೩ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಹಿನ್ನೆಲೆ ಧಾರವಾಡ ಜಿಲ್ಲಾಡಳಿತ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿದೆ. ಪರೀಕ್ಷೆ ಸಮಯದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಈ ಸೊಂಕು ಹರಡದಂತೆ ನೋಡಿಕೊಳ್ಳಲು ಎಲ್ಲ ವಿದ್ಯಾರ್ಥಿಗಳಿಗೆ ಕೊವಿಡ್ ಪರೀಕ್ಷೆ ಕಡ್ಡಾಯ ಮಾಡಿದೆ.
ಬಿವಿಬಿ ಕಾಲೇಜಿನಲ್ಲಿ ಪರೀಕ್ಷೆ ನಡೆದಿದ್ದರಿಂದ ಸೋಂಕಿತರಿಗೆ ಪ್ರತ್ಯೇಕೆ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿದೆ.ಸೋಂಕಿತರ ಸಂಖ್ಯೆ ಸಹ ರಾಜ್ಯದಲ್ಲಿ ಹೆಚ್ಚಾಗುತ್ತಿದ್ರೆ, ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಸೋಂಕು ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಕಂಡು ಬರುತ್ತಿದೆ ತಲ್ಲಣ ಮೂಡಿಸಿದೆ.