ಗುರುಮಠಕಲ್:ಜು.21:ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ಅಡಿಗೆ, ಅಡಿಗೆ ಸಹಾಯಕರು ಮತ್ತು ಕಾವಲುಗಾರರ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಸ್ಟೆಲ್ ಕಾರ್ಮಿಕರಿಗೆ ಬಾಕಿ ಇರುವ ಐದಾರು ತಿಂಗಳ ವೇತನವನ್ನು ಕೂಡಲೇ ಪಾವತಿ ಮಾಡಬೇಕು ಮತ್ತು ಇಎಸ್‍ಐ ಮತ್ತು ಇಪಿಎಫ್ ಸೌಲಭ್ಯಗಳನ್ನು ಒದಗಿಸಬೇಕು ಎಂದು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ(ರಿ) ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ ಕಛೇರಿ ಎದುರು ಪ್ರತಿಭಟನೆ ನಡೆಸಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್ ಮಾತನಾಡಿ “ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಊಟ, ವಸತಿ ನಿಲಯ ಸ್ವಚ್ಛತೆ, ಸುರಕ್ಷತೆ ಸೇರಿದಂತೆ ಕಠಿಣ ಪರಿಶ್ರಮವಹಿಸಿ ಸೇವೆ ಸಲ್ಲಿಸುತ್ತಿರುವ ಹಾಸ್ಟೆಲ್ ಕಾರ್ಮಿಕರು ತಾವು ಸಲ್ಲಿಸಿದ ಸೇವೆಗೆ ತಕ್ಕ ವೇತನ ಪ್ರತಿ ತಿಂಗಳು ಸಿಗದೆ ಮತ್ತು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ವೇತನ ಪಾವತಿ ಮಾಡುತ್ತಿರುವುದರಿಂದ ಕಾರ್ಮಿಕರು ಯಾವ ತಿಂಗಳ ವೇತನ ಪಾವತಿಯಾಗಿದೆ ಎಂಬುದೇ ಗೊತ್ತಾಗದೆ ಗೊಂದಲಕ್ಕೆ ಒಳಗಾಗಿ ಪ್ರತಿ ವರ್ಷ ಒಂದು ಅಥವಾ ಎರಡು ತಿಂಗಳ ವೇತನ ಕಾರ್ಮಿಕರ ಕೈ ತಪ್ಪಿ ಹೋಗುತ್ತಿರುವುದು ವಿಷಾದದ ಸಂಗತಿ. ಸಂಘದ ನಿರಂತರ ಪ್ರಯತ್ನದಿಂದಾಗಿ ಜಿಲ್ಲಾ ಪಂಚಾಯತ ಸಿ.ಇ.ಓ ಅವರ ನಿರ್ದೇಶನದಂತೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಏಜೆನ್ಸಿ ಗುತ್ತಿಗೆದಾರರು ಮತ್ತು ನಮ್ಮ ಸಂಘದ ಪದಾಧಿಕಾರಗಳ ಜೊತೆ ನಡೆದ ಜಂಟಿ ಸಭೆಯಲ್ಲಿ ಪ್ರತಿ ತಿಂಗಳು ವೇತನ ಪಾವತಿಮಾಡಿ, ಪಾವತಿಸಿದ ವೇತನ ಚೀಟಿಯನ್ನು ಕಾರ್ಮಿಕರಿಗೆ ನೀಡಬೇಕು, ಕಾರ್ಮಿಕರ ವೇತನದಲ್ಲಿ ಕಟಾಯಿಸಿದ ಇಪಿಎಫ್ ಮತ್ತು ಇಎಸ್‍ಐ ವಂತಿಗೆ ಹಣವನ್ನು ಕಾರ್ಮಿಕರ ನೋಂದಾಯಿತ ಇಪಿಎಫ್ ಮತ್ತು ಇಎಸ್‍ಐ ಖಾತೆಗಳಿಗೆ ಜಮಾ ಮಾಡಬೇಕು. ಜಮಾ ಮಾಡದೆ ಇರುವ ಮ್ಯಾನ್ ಪವರ್ / ಏಜೆನ್ಸಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಮತ್ತು ಹಲವು ವರ್ಷಗಳಿಂದ ಕಟ್ಟದೆ ಬಾಕಿ ಇರುವ ಇಪಿಎಫ್ ಮತ್ತು ಇಎಸ್‍ಐ ಮೊತ್ತವನ್ನು ಜಮಾ ಮಾಡುವುದು, ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡುವುದು, ವಾರದ ರಜೆ ಹಾಗೂ ರಾಷ್ಟೀಯ ಹಬ್ಬಗಳ ರಜೆ, ದಿನದ 08 ಗಂಟೆ ಅವಧಿ ಕೆಲಸ ಹಾಗು ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ(ಓಟಿ) ಪಾವತಿಸುವುದು ಸೇರಿದಂತೆ ಹಲವು ಶಾಸನಬದ್ಧ ಸೌಲಭ್ಯಗಳನ್ನು ಎಲ್ಲಾ ಕಾರ್ಮಿಕರಿಗೆ ಒದಗಿಸಲು ನಿರ್ಧರಿಸಲಾಗಿತ್ತು. ಆದರೆ ಸಭೆಯ ತೀರ್ಮಾನಗಳನ್ನು ಅನುಷ್ಠಾನ ಮಾಡುವಲ್ಲಿ ನಿಷ್ಕಾಳಜಿವಹಿಸಿದ್ದು ಖಂಡನೀಯ. ಆದ್ದರಿಂದ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿ ಮಾಡಿ ಮತ್ತು ಇಎಸ್‍ಐ ಮತ್ತು ಇಪಿಎಫ್ ಹಾಗು ಎಲ್ಲಾ ಶಾಸನಬದ್ಧ ಸೌಲಭ್ಯಗಳನ್ನು ಕೂಡಲೇ ಜಾರಿ ಮಾಡಬೇಕು ಮತ್ತು ಪರಿಷ್ಕರಣೆ ಆಗಿರುವ ವೇತನವನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು”.
ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಜಿ ತಿಳಿಗೇರಿಕರ್ ಮಾತನಾಡಿ “ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು. ಇಲ್ಲದೆ ಹೋದರೆ ಕಾರ್ಮಿಕರು ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ಮಕ್ಕಳ ವಿದ್ಯಭ್ಯಾಸ, ಆನಾರೋಗ್ಯ ಸೇರಿದಂತೆ ದೈನಂದಿನ ಜೀವನ ಸಾಗಿಸಲು ಪರದಾಡುವ ಸ್ಥಿತಿಯಲ್ಲಿ ಕಾರ್ಮಿಕರಿದ್ದಾರೆ. ಆದ್ದರಿಂದ ಪ್ರತಿ ತಿಂಗಳು ವೇತನ ಪಾವತಿ ಮಾಡಿದರೆ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು”.
ಮನವಿ ಪತ್ರವನ್ನು ಸ್ವೀಕರಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಧಿಕಾರಿ ಶ್ರಿ ಸರೋಜಾ ಅವರು ಮನವಿ ಪತ್ರ ಸ್ವೀಕರಿಸಿ “ವೇತನ ಬಾಕಿ ಇರುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದ ಬೇಡಿಕೆಗಳನ್ನು ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮಕೈಗೊಳ್ಳುವ ಭರವಸೆ ನೀಡಿದರು”.
ಈ ಪ್ರತಿಭಟನೆಯಲ್ಲಿ ಶ್ರೀಮತಿ ಜಗದೇವಿ ಶ್ರೀಗಿರಿ, ಶ್ರೀಕಾಂತ್ ಚಿಕ್ಕಮೇಟಿ, ಭೀಮಶಂಕರ್ ಗಜಾನಂದ, ಭಾಗಪ್ಪ, ಶ್ಯಾಮಪ್ಪ, ಸರಿತಾ, ಯಶೋದಾ, ಶ್ರೀದೇವಿ, ಶಭೀರಮ್ಮ, ಅಂಜಲಪ್ಪ, ಗಂಗಿಮಾಳಮ್ಮ, ಲಕ್ಷ್ಮೀ ಕಟ್ಟಿಮನಿ, ಮಮಾದೇವಿ, ಪುಷ್ಪಲತಾ, ಅಂಜಮ್ಮ, ನಾಗಮ್ಮ, ರೇಣುಕಾ, ಜಹಾಂಗಿರಬೇಗಂ, ಪರಿಮಳಾ, ಅರ್ಚನಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.