ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಕಲಬುರಗಿ:ಫೆ.07: ನಗರದಲ್ಲಿನ ಶಕ್ತಿನಗರದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಅವ್ಯವಸ್ಥೆ ಆಗರವಾಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಸವರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ವಸತಿ ನಿಲಯದಲ್ಲಿ ಯಾವುದೇ ರೀತಿಯ ಸ್ವಂತ ಕಟ್ಟಡ ಇಲ್ಲ. ಒಂದು ವಸತಿ ನಿಲಯವನ್ನು ಮೂರು ಬೇರೆ, ಬೇರೆ ಕಟ್ಟಡಗಳಲ್ಲಿ ನಡೆಸುತ್ತಿದ್ದಾರೆ. ಎರಡು ಕಟ್ಟಡಗಳಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 130 ಇರುವಂತಹ ವಿದ್ಯಾರ್ಥಿಗಳ ಹಾಸ್ಟೆಲ್‍ನಲ್ಲಿ ಕೇವಲ 30 ಮಂಚಗಳು ಹಾಗೂ 25 ಹಾಸಿಗೆಗಳು ಇವೆ. ಕೋಣೆಗಳ ಕಿಟಕಿಗಳು ಸರಿಯಿಲ್ಲದೇ ಇರುವುದರಿಂದ ಸೊಳ್ಳೆಗಳಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಗೀಜರ್‍ಗಳು ಕೆಟ್ಟು ಎರಡ್ಮೂರು ತಿಂಗಳಾದರೂ ಸಹ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿದರು.
ವಸತಿ ನಿಲಯದಲ್ಲಿ ಚಪ್ಪಲಿ ಇಡುವ ಸ್ಟ್ಯಾಂಡ್, ಸ್ಟಡಿ ಚೆಯರ್, ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಪುಸ್ತಕಗಳು ಇಲ್ಲ. ಕಂಪ್ಯೂಟರ್‍ಗಳು ಯಾವುದೇ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿಲ್ಲ. ಊಟ ಉಪಹಾರದಲ್ಲೂ ಗುಣಮಟ್ಟದ ಕೊರತೆ ಇದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯಲ್ಲಿ ಪ್ರಯೋಜನ ಆಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಸೌಲಭ್ಯವನ್ನು ಕಲ್ಪಿಸುವಂತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ, ಊಟದ ಗುಣಮಟ್ಟ ಸರಿಪಡಿಸುವಂತೆ, ವಿದ್ಯುತ್ ಬಲ್ಬ್‍ಗಳು, ಕಂಪ್ಯೂಟರ್‍ಗಳು, ಗ್ರಂಥಾಲಯ ಪುಸ್ತಕಗಳು, ವಸತಿ ನಿಲಯದಲ್ಲಿನ ಸಿಸಿಟಿವಿಗಳು, ಮಲಗುವ ಮಂಚ ಹಾಗೂ ಹಾಸಿಗೆಗಳು, ಅಭ್ಯಾಸ ಮಾಡುವ ಖುರ್ಚಿಗಳು, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಎಲ್ಲ ಸಮಸ್ಯೆ ಶೀಘ್ರ ಪರಿಹಾರಗೊಳ್ಳದೇ ಹೋದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು.