ಹಾಸ್ಟೆಲ್ ಅಡುಗೆ ನೌಕರರ ವೇತನ ಪಾವತಿಸಲು ಆಗ್ರಹ

ದೇವದುರ್ಗ,ಮಾ.೧೪- ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಕೆಲಸ ನಿರ್ವಹಿಸುವ ಹೊರಗುತ್ತಿಗೆ ನೌಕರರು ಬಾಕಿ ಇರುವ ೧೧ತಿಂಗಳ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ಸಮಾಜ ಕಲ್ಯಾಣಾಧಿಕಾರಿ ಹಾಗೂ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ಸಿಐಟಿಯು ನೇತೃತ್ವದಲ್ಲಿ ನೌಕರರು ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ತಾಲೂಕಿನ ವಿವಿಧ ಹಾಸ್ಟೆಲ್‌ಗಳಲ್ಲಿ ನೂರಾರು ನೌಕರರು ಕೆಲಸ ಮಾಡುತ್ತಿದ್ದಾರೆ. ಅಡುಗೆ ತಯಾರಕರಾಗಿ, ಸಹಾಯಕರಾಗಿ ಹಾಗೂ ಹಾಸ್ಟೆಲ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅನುದಾನ ನೆಪ ಹೇಳಿ ಕಳೆದ ೧೧ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ನೌಕರರು ಜೀವನ ನಡೆಸುವುದು ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮನೆಯ ಕೌಟುಂಬಿಕ ಸಮಸ್ಯೆಗಳಿಗೆ ಹಣದ ಕೊರತೆ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಆರ್ಥಿಕ ಸಂಕಷ್ಟವಾಗಿದೆ ಎಂದು ದೂರಿದರು.
ಕೂಡಲೇ ಎಲ್ಲ ಹಾಸ್ಟೆಲ್ ನೌಕರರು ಬಾಕಿ ಇರುವ ೧೧ತಿಂಗಳ ವೇತನ ನೀಡಬೇಕು. ಪ್ರತಿತಿಂಗಳು ೫ನೇ ತಾರೀಕಿನೊಳಗೆ ಶ್ಯಾಲರಿ ನೀಡಬೇಕು. ಎಲ್ಲ ಹೊರಗುತ್ತಿಗೆ ನೌಕರರಿಗೆ ಸೇವಾ ನಿಯಮ ಮಾಡಬೇಕು. ನೌಕರರಿಂದ ಎಫ್‌ಡಿ ಕಡಿತ ಮಾಡಿದ ಬಗ್ಗೆ ಮಾಹಿತಿ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಮಾ.೨೦ರಿಂದ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಚಂದ್ರಕಾಂತ, ಗೌರವಾಧ್ಯಕ್ಷ ಗಿರಿಯಪ್ಪ ಪೂಜಾರಿ, ಫಾತಿಮಾ, ಭೀಮಾಶಂಕರ್, ಮಾರೆಪ್ಪ, ಮರಿಯಮ್ಮ ಇತರರಿದ್ದರು.