ಹಾಸ್ಟೆಲ್‌ನಲ್ಲಿ ಬೆಂಕಿ: ೬ಮಂದಿ ಸಜೀವ ದಹನ

ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್), ಮೇ ೧೬- ಹಾಸ್ಟೆಲ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ೬ ಮಂದಿ ಮೃತಪಟ್ಟ ಘಟನೆ ತಡರಾತ್ರಿ ವೆಲ್ಲಿಂಗ್ಟನ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಇನ್ನೂ ನಾಪತ್ತೆಯಾಗಿದ್ದು, ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಮವಾರ ತಡರಾತ್ರಿ ವೆಲ್ಲಿಂಗ್ಟನ್‌ನಲ್ಲಿರುವ ನಾಲ್ಕು ಅಂತಸ್ತಿನ ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ನಲ್ಲಿ ಒಟ್ಟು ೯೨ ಕೊಠಡಿಗಳನ್ನು ಹೊಂದಿದ್ದು, ಅಲ್ಪಾವಧಿಯ ಮತ್ತು ದೀರ್ಘಾವಧಿಗೆ ಅತಿಥಿಗಳಿಗೆ ಕೊಠಡಿಗಳನ್ನು ಪೂರೈಸುತ್ತದೆ. ಈಗಾಗಲೇ ೧೨ಕ್ಕೂ ಹೆಚ್ಚು ಮಂದಿಯನ್ನು ಘಟನಾ ಸ್ಥಳದಿಂದ ರಕ್ಷಿಸಲಾಗಿದ್ದು, ಆದರೆ ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಎಚ್ಚರಿಸಿದ್ದಾರೆ. ಕಟ್ಟಡವನ್ನು ಪ್ರವೇಶಿಸಿ, ಪರಿಶೀಲನೆ ನಡೆಸುವವರೆಗೂ ಸಾವಿನ ಸಂಖ್ಯೆಯನ್ನು ನಿಖರವಾಗಿ ತಿಳಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದ ಮೇಲಿನ ಭಾಗ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ.
ಕೂಡಲೇ ಬೆಂಕಿ ನಂದಿಸಲು ಕನಿಷ್ಠ ೨೦ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ಮತ್ತು ತುರ್ತು ಜಿಲ್ಲಾ ಕಮಾಂಡರ್ ನಿಕ್ ಪ್ಯಾಟ್, ಇದೊಂದು ದುಸ್ವಪ್ನವಾಗಿದೆ. ಕಟ್ಟಡದಲ್ಲಿ ಕಲ್ನಾರು ಇದೆ ಮತ್ತು ಹೊಗೆಯನ್ನು ಉಸಿರಾಡುವುದನ್ನು ತಪ್ಪಿಸಲು ಸ್ಥಳೀಯರು ಫೇಸ್ ಮಾಸ್ಕ್ ಧರಿಸಬೇಕು ಮತ್ತು ತಮ್ಮ ತಮ್ಮ ಮನೆಗಳ ಕಿಟಕಿಗಳನ್ನು ಮುಚ್ಚಬೇಕು. ಎಲ್ಲರಿಗೂ ಇದೊಂದು ದುರಂತ ಘಟನೆ. ಪ್ರಾಣ ಕಳೆದುಕೊಂಡವರ ಆತ್ಮೀಯರಿಗೆ ನನ್ನ ಸಂತಾಪಗಳು ಎಂದು ಅವರು ತಿಳಿಸಿದ್ದಾರೆ.
ಉರಿಯುತ್ತಿರುವ ಕಟ್ಟಡದ ಮೇಲ್ಛಾವಣಿಯಿಂದ ಕನಿಷ್ಠ ಐದು ಜನರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ, ಆದರೆ ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.