ಹಾಸ್ಟೆಲ್‍ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಸೂಚನೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಫೆ.೭; ವಸತಿ ಶಾಲೆ ಹಾಗೂ ವಸತಿ ನಿಲಯ ವಿದ್ಯಾರ್ಥಿಗಳಿಗೆ ನಿಲಯ ಪಾಲಕರೇ ಪೋಷಕರಾಗಿದ್ದು, ವಸತಿ ನಿಲಯದ ವಿದ್ಯಾರ್ಥಿಗಳನ್ನು ತಾವುಗಳು ತಮ್ಮ ಮಕ್ಕಳ ರೀತಿಯಲ್ಲಿ ಕಾಣಬೇಕು. ತಪ್ಪು ಮಾಡಿದಾಗ ಎಚ್ಚರಿಸಿ, ಉತ್ತಮ ಕೆಲಸ ಮಾಡಿದಾಗ ಗೌರವಿಸಿ, ಪ್ರೀತಿ ತೋರಬೇಕು ಅಲ್ಲದೆ ಹಾಸ್ಟೆಲ್ ಗಳಲ್ಲಿ ಕಡ್ಡಾಯವಾಗಿ ಶುಚಿತ್ವ ಕಾಪಾಡಿಕೊಳ್ಳಬೆಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳ ಸಿಬ್ಬಂದಿಗಳಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ವಸತಿ ಶಾಲೆ ಹಾಗೂ ವಸತಿ ನಿಲಯಗಳ ಎಲ್ಲ ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಹಾಸ್ಟೆಲ್ ಸ್ವರ್ಗವಾಗಲಿದೆ. ಇಲ್ಲವಾದರೆ ಅದು ನರಕವಾಗಲಿದೆ. ಹೊಂದಾಣಿಕೆ ಕೊರತೆ ಉಂಟಾದರೆ ಅದು ಮಕ್ಕಳ ಮೇಲೆ ದುಷ್ಪರಿಣಾಮ ಬೀಳಲಿದೆ ಎಂದರು.ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗಿನ ವರ್ಗದ ಮಕ್ಕಳು, ಮಧ್ಯಮವರ್ಗದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‍ನಲ್ಲಿ ಪ್ರವೇಶಾವಕಾಶ ಪಡೆಯುತ್ತಾರೆ. ಸರ್ಕಾರ ನೀಡುವ ಅನುದಾನದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ನೀರು, ಶುಚಿತ್ವ ಹಾಗೂ ಉತ್ತಮ ವಾತಾವರಣ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ವಸತಿ ಶಾಲೆ, ಹಾಸ್ಟೆಲ್ ವಿದ್ಯಾರ್ಥಿಗಳಿಂದ ಯಾವುದೇ ರೀತಿಯಾದ ಶುಚಿತ್ವ ಕಾರ್ಯ ಆಗದೇ ರೀತಿಯಲ್ಲಿ ಎಚ್ಚರವಹಿಸಬೇಕು ಎಂದರು.