ಹಾಸಿಗೆ ಕೊರತೆಯಿಲ್ಲ ಆತಂಕ ಬೇಡ: ಗೌರವ್

ಬೆಂಗಳೂರು, ಏ.೧೭-ನಗರದಲ್ಲಿ ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಐಸಿಯು ಬೆಡ್(ಹಾಸಿಗೆ)ಗಳ ಕೊರತೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಶಿವಾಜಿನಗರದ ಚರಕ ಆಸ್ಪತ್ರೆಯಲ್ಲೂ ಐಸಿಯು ಬೆಡ್ ಗಳು ದೊರೆಯಲಿದೆ.ಜತೆಗೆ ಬಹುತೇಕ ಆಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸಾ ವ್ಯವಸ್ಥೆಯೂ ಸಾಕಷ್ಟು ಸುಧಾರಿಸಿದೆ ಎಂದರು.
ನಗರದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಹಾಸಿಗೆ ಕೊರತೆ ಇಲ್ಲ. ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದ ಅವರು, ನಗರದಲ್ಲಿ ತುರ್ತು ಚಿಕಿತ್ಸಾ? ಘಟಕದ ವ್ಯವಸ್ಥೆ, ಆಕ್ಸಿಜನ್ ಹಾಗೂ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡುವ ವ್ಯವಸ್ಥೆಗಳು ಈ ಹಿಂದೆಗಿಂತ ಚೆನ್ನಾಗಿದೆ ಎಂದು ತಿಳಿಸಿದರು.
ಕೋವಿಡ್ ರೋಗಿಗಳ ಬೆಡ್ ಮೀಸಲಿಡಬೇಕೆಂದು ಈಗಾಗಲೇ ಎಲ್ಲಾ ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.ಅಲ್ಲದೆ, ತುರ್ತು ಪರಿಸ್ಥಿತಿ ಇಲ್ಲದಿದ್ದರೂ, ಐಸಿಯು ಬೆಡ್ ಗಳನ್ನು ಕಾಯ್ದಿರಿಸಿ ಅಥವಾ ಉಪಯೋಗಿಸುತ್ತಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಚಿತ:ಕೋವಿಡ್ ಸೋಂಕಿತರನ್ನು ಆಸ್ಪತ್ರೆ?ಗೆ ಕರೆದುಕೊಂಡು ಹೋಗಲು ೧೯೮ ವಾರ್ಡ್‌ಗಳಿಗೆ ೨೬೦ ಆಂಬುಲೆನ್ಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸೋಂಕಿತರನ್ನು ಅವರ ಮನೆಯಿಂದ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ಆಂಬುಲೆನ್ಸ್‌ಗಳಿಗೂ ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ.
ಅದೇ ರೀತಿಯಲ್ಲಿ, ಕೋವಿಡ್ ಶವಗಳನ್ನು ಆಸ್ಪತ್ರೆಯಿಂದ ಚಿತಾಗಾರಕ್ಕೆ ಸಾಗಿಸಲು ೪೯ ಶವ ಸಾಗಣೆ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಯೂ ಉಚಿತವಾಗಿದ್ದು ಯಾವುದೇ ಹಣ ನೀಡಬಾರದು ಎಂದು ಅವರು ಹೇಳಿದರು.
ಇನ್ನೂ ಬಿಬಿಎಂಪಿಯ ಎಲ್ಲ ವಿದ್ಯುತ್ ಚಿತಾಗಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಲಯ ಮಟ್ಟದಲ್ಲಿ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಗೌರವ್ ಗುಪ್ತ ನುಡಿದರು.