ಹಾಸನ ಲೈಂಗಿಕ ದೌರ್ಜನ್ಯ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.14: ಹಾಸನ ಜಿಲ್ಲೆ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಪೆನ್ ಡ್ರೈವ್ ಹಂಚಿಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಪೆನ್ ಡ್ರೈವ್ ಹಂಚಿಕೆಗೆ ಕಾರಣರಾದವರನ್ನು ಪತ್ತೆ ಮಾಡಿ ಶಿಕ್ಷೆಗೊಳಪಡಿಸಿ, ಮಹಿಳೆಯರ ಘನತೆಯ ಬದುಕಿನ ಹಕ್ಕಿನ ರಕ್ಷಣೆಗಾಗಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವಿಜಯಪುರ ಜಿಲ್ಲಾ ಶಾಖೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ರೇವಣ್ಣ, ಪ್ರಜ್ವಲ್ ಹಾಗೂ ಸಿಡಿ ಹಂಚಿಕೆ ಮಾಡಿದವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಅನಂತರ ಜಿಲ್ಲಾಧಿಕಾರಿ ಮೂಲಕ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಭಾರತಿ ವಾಲಿ ಮಾತನಾಡಿ, ಕರ್ನಾಟಕ ಸರ್ಕಾರ ಹಾಸನದ ‘ಪೆನ್ ಡ್ರೈವ್’ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ‘ವಿಶೇಷ ತನಿಖಾ ದಳ (SIಖಿ)’ ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಜೊತೆಗೆ ಪ್ರಕರಣದ ತನಿಖೆಗೆ ಹಾಗೂ ಆರೋಪಿಗಳ ಬಂಧನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅಧಿಕಾರ ಮತ್ತು ಸೂಕ್ತ ವ್ಯವಸ್ಥೆಯನ್ನು ಎಸ್‍ಐಟಿಗೆ ಒದಗಿಸಬೇಕು. ಇಡೀ ಪ್ರಕರಣದ ತನಿಖೆಗೆ ಜನಸ್ನೇಹಿ ಹಾಗೂ ಮಹಿಳಾಪರ ಸಂವೇದನೆ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಈಗ ನೇಮಕವಾಗಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‍ರನ್ನು ನೇಮಿಸಿ ತನಿಖೆ ಚುರುಕಾಗಿ ನಡೆದು ಆದಷ್ಟು ಬೇಗ ಸತ್ಯಾಂಶವನ್ನು ಹೊರತೆಗೆಯಬೇಕು ಮತ್ತು ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಬೇಕು. ಯಾವುದೇ ಕಾರಣಕ್ಕೂ ಸಾಕ್ಷಿ ನಾಶವಾಗದಂತೆ ಎಚ್ಚರವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಸೌಜನ್ಯ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಯಲ್ಲಿನ ಲೋಪದಿಂದ ನ್ಯಾಯ ನೀಡಲು ಸಾಧ್ಯವಾಗಿಲ್ಲ ಎಂಬುದನ್ನು ಸಿ.ಬಿ.ಐ ನ್ಯಾಯಾಲಯವೇ ಹೇಳಿದ ಘಟನೆ ಇದೇ ನೆಲದಲ್ಲಿ ನಡೆದಿದ್ದು, ಅದನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ. ತನಗಿರುವ ಅಧಿಕಾರ, ಅಂತಸ್ತು, ಕುಟುಂಬದ ಪ್ರಭಾವ ಮತ್ತು ಜಾತಿ ಪ್ರಭಾವವನ್ನು ಬಳಸಿ ನೂರಾರು ಮಹಿಳೆಯರನ್ನು ತನ್ನ ಕಾಮದಾಹಕ್ಕೆ ಬಳಸಿಕೊಂಡು ನಡೆಸಿದ ಲೈಂಗಿಕ ಕ್ರಿಯೆ ಮತ್ತು ಅವರೊಂದಿಗೆ ನಡೆಸಿದ ನಗ್ನ ವೀಡಿಯೋ ಚಾಟ್‍ಗಳನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು ಸಾವಿರಾರು ವೀಡಿಯೋಗಳನ್ನು ಸಂಗ್ರಹಿಸಿಕೊಂಡಿರುವ ‘ಪೆನ್‍ಡೈವ್’ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ರುವಾರಿ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಿ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮುಖಂಡೆ ಸರೇಖಾ ರಜಪೂತ ಮಾತನಾಡಿ, ಹಾಸನದಲ್ಲಿ ಕೆಲವು ದಿನಗಳ ಹಿಂದೆ ನಡೆದ ಪೆನ್‍ಡ್ರೈವ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರು ಎಷ್ಟೇ ರಾಜಕೀಯ ಪ್ರಭಾವಿಯಾಗಿದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರ ಖಾಸಗಿ ಮತ್ತು ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಪೆನ್‍ಡೈನ್ ಮುಖಾಂತರ ಸಾರ್ವಜನಿಕರಿಗೆ ವಿತರಿಸಿ ವಾಟ್ಸ್‍ಆಪ್ ಮುಖಾಂತರ ಎಲ್ಲೆಡೆ ಹರಡಲು ಕಾರಣವಾದವರನ್ನು ಪತ್ತೆಹಚ್ಚಿ ಅವರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದೂ ಅವರು ಆಗ್ರಹಿಸಿದರು.
ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯದಲ್ಲಿ ಸಂತ್ರಸ್ತರಾಗಿರುವ ಮಹಿಳೆಯ ಗೌಪ್ಯತೆಯನ್ನು ಕಾಪಾಡಬೇಕು. ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಸಂತ್ರಸ್ತ ಮಹಿಳೆಯರಿಗಾಗಿ ಪ್ರತ್ಯೇಕ ಕೌನ್ಸೆಲಿಂಗ್ ಕೇಂದ್ರಗಳನ್ನು ತೆರೆಯಬೇಕು ಹಾಗೂ ಸಂತ್ರಸ್ಥ ಮಹಿಳೆಯರಿಗೆ ದೂರು ದಾಖಲಿಸಲು ಸಾಧ್ಯವಾಗುವಂತೆ ಹಾಸನದಲ್ಲಿ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕವಾದ ದೂರು ಕೇಂದ್ರಗಳನ್ನು ಸ್ಥಾಪಿಸಬೇಕು. ಜೊತೆಗೆ ದೂರು ದಾಖಲಿಸಲು ಬರುವ ಸಂತಸ್ಥ ಮಹಿಳೆಯರಿಗೆ ಸೂಕ್ತ ಭದ್ರತೆ ಮತ್ತು ಪ್ರಯಾಣ ವ್ಯವಸ್ಥೆ ಒದಗಿಸಬೇಕು. ಇಡೀ ಪ್ರಕರಣದ ತನಿಖೆಯಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವ ಯಾವುದೇ ರಾಜಕೀಯ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗದಂತೆ ಎಸ್‍ಐಟಿ ಕೆಲಸ ಮಾಡುವುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎ.ಆರ್. ಹಜೇರಿ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಹಗರಣಗಳ ಬಗ್ಗೆ ತೀವ್ರವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಾಜಮಾ ನಧಾಪ, ಕುಸಮಾ ಹಜೇರಿ, ಸುಮಿತ್ರಾ ಗೊಣಸಗಿ, ಕಾರ್ಯದರ್ಶಿ ಗಂಗೂಬಾಯಿ ಸಿಂದಗಿ, ಉಪಾಧ್ಯಕ್ಷೆ ಮಾಬೂಬಿ ಪಾಂಡುಗೋಳ, ಸದಸ್ಯರಾದ ಮಂಜುಳಾ ಹಜೇರಿ, ಸಕುಬಾಯಿ ಕಟ್ಟಿಮನಿ, ರಮಿಜಾ ತಿಕೋಟಾ, ಲಾಲಬಿ ವಾಲಿಕಾರ, ಶಮಶಾದ ಚಡಚಣ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.