ಹಾಸನ ಟಿಕೆಟ್ ರಗಳೆ ಕುಟುಂಬದವರ ದಾರಿ ತಪ್ಪಿಸುವ ಕೆಲಸ

ಎಚ್‌ಡಿಕೆ ಬೇಸರ
ಹುಬ್ಬಳ್ಳಿ,ಏ.೧೧ : ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಹಿಂದೆಯೇ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡುವುದಾಗಿ ಹೇಳಿದ್ದೆ, ಆದರೆ ಇದನ್ನು ಅರಿಯದ ಕೆಲವರು ನಮ್ಮ ಕುಟುಂಬದವರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ಬಿಜೆಪಿ ಶಾಸಕ ಒಂದು ವರ್ಷದ ಹಿಂದೆ ಸವಾಲು ಹಾಕಿ, ನಮ್ಮ ಕುಟುಂಬದ ವಿರುದ್ಧ ಮಾತನಾಡಿದ್ದು, ಅದಕ್ಕೆ ನಮ್ಮ ಕುಟುಂಬದವರನ್ನೆ ನಿಲ್ಲಿಸಿ ಉತ್ತರ ಕೊಡಬೇಕಾಗಿಲ್ಲ, ಇದನ್ನು ಒಂದು ವರ್ಷದ ಹಿಂದೆಯೂ ಹೇಳಿದ್ದೇನೆ. ಸಾಮಾನ್ಯ ಕಾರ್ಯಕರ್ತನ ಮೂಲಕ ಅವರಿಗೆ ತಕ್ಕ ಉತ್ತರ ಕೊಡಲಿದ್ದೇವೆ ಎಂದರು.
ರೇವಣ್ಣ ಹೊಳೆನರಸೀಪುರ ಹಾಗೂ ಹಾಸನ ಕ್ಷೇತ್ರದಲ್ಲಿ ಟಿಕೆಟ್ ಕೇಳಿಲ್ಲ, ಇದು ಕೇವಲ ಮಾಧ್ಯಮಗಳ ಸೃಷ್ಟಿ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ. ಹಾಗೂ ಸಮಯದ ಅಭಾವದಿಂದ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಆಗುತ್ತಿಲ್ಲ, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಪಂಚರತ್ನ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಈಗಾಗಲೇ ಚುನಾವಣಾ ಪ್ರಚಾರವನ್ನು ಆರಂಭಿಸಲಾಗಿದೆ. ನಿನ್ನೆ ಚಳಗೇರಿ, ಬಳ್ಳಾರಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದೇನೆ. ಇಂದು ಹು-ಧಾ ಪೂರ್ವ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲಿದ್ದೇನೆ. ನಂತರ ಮಧ್ಯಾಹ್ನ ಸವದತ್ತಿಗೆ ಭೇಟಿ ನೀಡಿ, ಆನಂದ ಚೋಪ್ರಾ ಅವರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಚರ್ಚೆ ಮಾಡಲಿದ್ದೇನೆ. ಆಬಳಿಕ ಜೋಯಿಡಾ, ದಾಂಡೇಲಿ ಪ್ರವಾಸ ಕೈಗೊಳ್ಳುತ್ತೇನೆ. ಏ. ೧೩ ರಂದು ಸೇಡಂ, ಅಫಜಲಪುರದಲ್ಲಿ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ದಲಿತ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ೨೦೧೮ ರಲ್ಲಿಯೇ ದೇವೆಗೌಡರು ಖರ್ಗೇ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಸಲಹೆ ನೀಡಿದರು. ಆಗ ಕಾಂಗ್ರೆಸ್’ನವರು ಯಾರು ಆ ಕೆಲಸ ಮಾಡಲಿಲ್ಲ, ಅವಕಾಶ ಕೈಯಲ್ಲಿದ್ದಾಗ ಏನೂ ಮಾಡದವರು ಇದೀಗ ದಲಿತರನ್ನು ಸಿಎಂ ಮಾಡುತ್ತಾರೆಯೇ ಎಂದು ಪ್ರಶ್ನೆ ಮಾಡಿ, ಇದು ಸಮಯ ಸಾಧಕ ರಾಜಕಾರಣವಾಗಿದೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ಆವತ್ತಿನ ಕುರುಕ್ಷೇತ್ರದ ವಾತಾವರಣ ಇಂದಿಗೂ ನಡೆಯುತ್ತಿದೆ. ದೇವೆಗೌಡರ ಕುಟುಂಬ ಮುಗಿಸಲು ಶಕುನಿಗಳು ತಂತ್ರ ಹುಡುತ್ತಿದ್ದಾರೆ. ಹೀಗಾಗಿ ಪಕ್ಷ ಗೆಲ್ಲಬೇಕೆಂದು ಹೇಳುತ್ತಿದ್ದೇನೆ. ಬಿಜೆಪಿ, ಕಾಂಗ್ರೆಸ್ ನಿಂದ ಹಲವರು ಬರಲಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಹೊಂದಾಣಿಕೆ ಮಾತುಕತೆ ನಡೆಯುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.ಅಮೂಲ್ ವಿರುದ್ಧ ಹೋರಾಡಿದವರನ್ನು ಬಂಧಿಸಿರುವುದು ತಪ್ಪು, ನಂದಿನಿ ಉಳಿವಿಗಾಗಿ ಕನ್ನಡಿಗರು ಹೋರಾಡುತ್ತಿದ್ದಾರೆ. ಹೋರಾಟ ಹತ್ತಿಕ್ಕುವ ಕ್ರಮ ಖಂಡನೀಯ ಎಂದು ಅವರು ನುಡಿದರು.