ಹಾಸನ ಟಿಕೆಟ್ ಕಗ್ಗಂಟು ಎಚ್‌ಡಿಡಿ ರಂಗಪ್ರವೇಶ

ಬೆಂಗಳೂರು,ಏ.೧:ವಿಧಾನಸಭಾ ಕ್ಷೇತ್ರದ ಟಿಕೆಟ್ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ರೇವಣ್ಣ ನಡುವೆ ನಡೆದಿರುವ ಜಟಾಪಟಿಗಳಿಗೆ ಅಂತ್ಯಹಾಡಿ ಎಲ್ಲವನ್ನೂ ಸರಿಪಡಿಸಲು ಮಾಜಿ ಪ್ರಧಾನಿ ದೇವೇಗೌಡರು ರಂಗ ಪ್ರವೇಶಿಸಿದ್ದು, ಹಾಸನ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಜಿಲ್ಲಾ ಮುಖಂಡರುಗಳ ಜತೆ ಸಭೆ ನಡೆಸುವರು.
ಮಾಜಿ ಪ್ರಧಾನಿ ದೇವೇಗೌಡರ ಪದ್ಮನಾಭ ನಗರ ನಿವಾಸದಲ್ಲಿ ಇಂದು ಮಧ್ಯಾಹ್ನ ೩ ಗಂಟೆಗೆ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಹಾಸನ ಜಿಲ್ಲೆಯ ಜೆಡಿಎಸ್‌ನ ಮುಖಂಡರುಗಳು ಪಾಲ್ಗೊಳ್ಳುವರು.
ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕೇ ಇಲ್ಲವೆ ಸ್ವರೂಪ್‌ಗೆ ಟಿಕೆಟ್ ನೀಡಬೇಕೇ ಎಂಬ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಇಂದು ಹಾಸನ ಕ್ಷೇತ್ರದ ಜೆಡಿಎಸ್ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವರು.
ಹಾಸನ ಟಿಕೆಟ್‌ಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ರೇವಣ್ಣ ನಡುವೆ ಜಟಾಪಟಿ ನಡೆದಿದ್ದು, ರೇವಣ್ಣ ಅವರು ತಮ್ಮ ಪತ್ನಿ ಭವಾನಿ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಕುಮಾರಸ್ವಾಮಿಯವರು ಭವಾನಿ ಅವರಿಗೆ ಟಿಕೆಟ್ ಬೇಡ, ಸ್ವರೂಪ್‌ಗೆ ಟಿಕೆಟ್ ನೀಡೋಣ ಎಂಬ ನಿಲುವು ಹೊಂದಿದ್ದಾರೆ. ಇದು ರೇವಣ್ಣ ಮತ್ತು ಕುಮಾರಸ್ವಾಮಿ ಅವರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.
ಸಹೋದರರ ಜಗಳವನ್ನು ಶಮನ ಮಾಡಲು ದೇವೇಗೌಡರು ಅಖಾಡಕ್ಕಿಳಿದಿದ್ದು ಇಂದು ನಡೆಯುವ ಹಾಸನ ಜಿಲ್ಲಾ ಮುಖಂಡರ ಸಭೆಯಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕೇ ಬೇಡವೇ ಎಂಬುದು ಅಂತಿಮಗೊಳ್ಳಲಿದೆ.