ಹಾಸನದಲ್ಲಿ ಸೆ. 25ರಿಂದ 3 ದಿನಗಳ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮ್ಮೇಳನ

ಕಲಬುರಗಿ,ಸೆ.13: ಹಾಸನದಲ್ಲಿ ಇದೇ ಸೆಪ್ಟೆಂಬರ್ 25,26 ಮತ್ತು 27ರಂದು ಒಟ್ಟು ಮೂರು ದಿನಗಳ ಕಾಲ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮ್ಮೇಳನ ಜರುಗಲಿದೆ ಎಂದು ಸಿಪಿಐ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಡಾ. ಕೆ.ಎಸ್. ಜನಾರ್ಧನ್ ಅವರು ಹೇಳಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು. ಮೂರು ದಿನಗಳ ಸಮ್ಮೇಳನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ಪಕ್ಷ ಪಾತ್ರ ಏನಿರಲಿದೆ ಎಂದು ಸಮ್ಮೇಳನದಲ್ಲಿ ತೀರ್ಮಾನಿಸಲಾಗುವುದು. ಮುಂದಿನ ಮೂರು ವರ್ಷಗಳ ಕಾರ್ಯತಂತ್ರಗಳನ್ನು ರೂಪಿಸಲಾಗುವುದು ಹಾಗೂ ಮುಂದಿನ ಮೂರು ವರ್ಷಗಳ ಕಾಲ ಪಕ್ಷವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಸಮ್ಮೇಳನದ ಅಂಗವಾಗಿ ಅನೇಕ ಸಾಂಸ್ಕøತಿಕ ಚಟುವಟಿಕೆಗಳನ್ನು ನಾಡಿನ ಬುದ್ದಿ ಜೀವಿಗಳೊಂದಿಗೆ ಚರ್ಚೆ, ದುಡಿಯುವ ವರ್ಗದ ಪ್ರತಿನಿಧಿ ನಾಯಕರಾದ ರೈತ ನಾಯಕರೊಂದಿಗೆ, ಕಾರ್ಮಿಕ ನಾಯಕರೊಂದಿಗೆ, ವಿದ್ಯಾರ್ಥಿ ನಾಯಕರೊಂದಿಗೆ, ಮಹಿಳಾ ನಾಯಕರೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಕಾರ್ಮಿಕರ ಮಧ್ಯೆ, ರೈತರ ಮಧ್ಯೆ ಕೆಲಸ ಮಾಡುತ್ತಿರುವ ಎಲ್ಲ ಪ್ರತಿನಿಧಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಆಯಾ ವಿಷಯ ಸಂಬಂಧ ತೀರ್ಮಾನಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪಕ್ಷದ ಜಿಲ್ಲಾ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಜರುಗಿದೆ. ಇದೇ ಸಂದರ್ಭದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪಕ್ಷಕ್ಕೆ ನಾಯಕತ್ವವನ್ನು ಕೊಡಲು 17 ಜನರ ಜಿಲ್ಲಾ ಮಂಡಳಿಯನ್ನು ಹಾಗೂ ಏಳು ಜನರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ನೂತನ ಜಿಲ್ಲಾ ಕಾರ್ಯದರ್ಶಿಗಳನ್ನಾಗಿ ಮಹೇಶ್ ರಾಠೋಡ್, ಸಹ ಕಾರ್ಯದರ್ಶಿಗಳಾಗಿ ಕಾ. ಪದ್ಮಾವತಿ ಮಾಲಿಪಾಟೀಲ್, ಕಾ. ಪ್ರಭುದೇವ್ ಯಳಸಂಗಿ, ಖಜಾಂಚಿಯಾಗಿ ಎಚ್.ಎಸ್. ಪತಕಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾ. ಮೌಲಾ ಮುಲ್ಲಾ, ಕಾ. ಭೀಮಾಶಂಕರ್ ಮಾಡಿಯಾಳ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾ ಸಮ್ಮೇಳನದಲ್ಲಿ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲ ನೀರಾವರಿ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸುವಂತೆ, ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ ರೈತರಿಗೆ ಕೂಡಲೇ ಪರಿಹಾರ ಒದಗಿಸುವಂತೆ ಮತ್ತು ರೈತರ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವಂತೆ, ಹೊಸ ತಾಲ್ಲೂಕುಗಳ ಅಭಿವೃದ್ಧಿಗಾಗಿ ತಾಲ್ಲೂಕು ಕಚೇರಿಗಳನ್ನು ಕೂಡಲೇ ಪ್ರಾರಂಭಿಸುವಂತೆ, ಕೋಮು ಶಕ್ತಿಗಳಿಗೆ ಕಡಿವಾಣ ಹಾಕಲು ನ್ಯಾಯಸಮ್ಮತವಾದ ನಿಷ್ಪಕ್ಷಪಾತ ಕ್ರಮಗಳನ್ನು ಕೈಗೊಳ್ಳುವಂತೆ, ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕಲಂ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ, ಮಹಾತ್ಮಾ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಹೊಲಗಳ ಕಳೆ ನಿರ್ವಹಣೆಗಾಗಿ ಉದ್ಯೋಗ ಖಾತ್ರಿ ಯೋಜನೆಗಳನ್ನು ರೈತರ ಹೊಲ ಗದ್ದೆಗಳಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ನಿರ್ಣಯಗಳನ್ನು ಪಕ್ಷದ ಜಿಲ್ಲಾ ಸಮಾವೇಶದಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಮಹೇಶಕುಮಾರ್ ರಾಠೋಡ್, ಕಾ. ಮೌಲಾ ಮುಲ್ಲಾ, ಕಾ. ಪದ್ಮಾವತಿ ಪಾಟೀಲ್, ಕಾ. ಪ್ರಭುದೇವ್ ಯಳಸಂಗಿ, ಕಾ. ಭೀಮಾಶಂಕರ್ ಮಾಡಿಯಾಳ್ ಮುಂತಾದವರು ಉಪಸ್ಥಿತರಿದ್ದರು.