ಹಾವೇರಿ: ಧಾರಾಕಾರ ಮಳೆ; ಹೊತ್ತಿ ಉರಿದ ತೆಂಗಿನಮರ

ಹಾವೇರಿ, ಎ.೧೯- ಜಿಲ್ಲೆಯ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲಿನ ಅಬ್ಬರಕ್ಕೆ ರಾಣೇಬೆನ್ನೂರು ತಾಲೂಕಿನ ಕೆರಿಮಲ್ಲಾಪುರ ಗ್ರಾಮದಲ್ಲಿ ಆದಿತ್ಯವಾರ ತೆಂಗಿನ ಮರವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಜಿಲ್ಲೆಯಲ್ಲಿ ಸಂಜೆಯಾಗುತ್ತಿದ್ದಂತೆ ಹಾವೇರಿ ನಗರ, ಸವಣೂರು ತಾಲೂಕಿನ ಮೆಳಾಗಟ್ಟಿ, ಕುರುಬರಮಲ್ಲೂರು ಗ್ರಾಮದಲ್ಲಿ ಧಾರಾಕಾರ ಮಳೆ ಸುರಿಯಲು ಆರಂಭವಾಗಿದೆ. ಇತ್ತ ಕಿತ್ತೂರು, ಮರಡೂರು, ಸೇರಿದಂತೆ ಹಲವೆಡೆ ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದೆ. ಪರಿಣಾಮ ರಾಣೇಬೆನ್ನೂರು ತಾಲೂಕಿನ ಕೆರಿಮಲ್ಲಾಪುರ ಗ್ರಾಮದಲ್ಲಿ ತೆಂಗಿನಮರಕ್ಕೆ ಸಿಡಿಲು ಬಡಿದು ತೆಂಗಿನಮರ ಧಗಧಗನೆ ಹೊತ್ತಿ ಉರಿದಿದೆ. ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಬಿರುಗಾಳಿ, ಗುಡುಗು ಸಹಿತ ವರುಣನ ಅಬ್ಬರಕ್ಕೆ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.