ಹಾವೇರಿ ಅತ್ಯಾಚಾರ ತಪ್ಪಿತಸ್ಥರ ವಿರುದ್ಧ ಕ್ರಮ

ಬೆಂಗಳೂರು, ಜ. ೧೩- ಹಾವೇರಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಯಾರ ರಕ್ಷಣೆಯ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ನಡೆದಿದೆ. ತನಿಖಾ ವರದಿ ಬರುವವರೆಗೂ ನಾವು ಏನನ್ನೋ ಊಹೆ ಮಾಡಿ ಹೇಳಿಕೆ ಕೊಡುವುದು ಸರಿ ಹೋಗುವುದಿಲ್ಲ. ತನಿಖಾ ವರದಿ ಬರಲಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಪ್ರಕರಣದಲ್ಲಿ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ. ಯಾರ ರಕ್ಷಣೆಯ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
ಕರ್ನಾಟಕ ಮಹಿಳೆಯರಿಗೆ ಸುರಕ್ಷಿತ ಅಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ಇದ್ದಾಗಲೂ ಇಂತಹ ಘಟನೆಗಳು ಆಗಲ್ಲವೇ, ಆಗ ರಾಜ್ಯ ಸುರಕ್ಷಿತ ಇರಲಿಲ್ಲ ಎಂದು ನಾವು ಹೇಳಬೇಕಿತ್ತಾ ಎಂದು ತಿರುಗೇಟು ನೀಡಿದರು.
ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನೆಲ್ಲಾ ಮಾಡಿದ್ದೇವೆ, ತನಿಖೆ ನಡೆದಿದೆ ಎಂದರು.
ಮಹಿಳೆಯರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಿದೆ. ನಿರ್ಭಯ ಕಾರ್ಯಕ್ರಮದಡಿ ಮಹಿಳೆಯರ ಸುರಕ್ಷತೆಗೆ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಬೆಂಗಳೂರಿನಲ್ಲಿ ಸುರಕ್ಷತೆಗೆ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ. ಎಲ್ಲೋ ಒಂದು ಕಡೆ ಒಂದು ಪ್ರಕರಣ ನಡೆದರೆ ಅದನ್ನೇ ಇಟ್ಟುಕೊಂಡು ಕರ್ನಾಟಕ ಸುರಕ್ಷಿತವಲ್ಲ ಎಂಬ ಹೇಳಿಕೆ ನೀಡುವುದು ಸರಿ ಹೋಗುವುದಿಲ್ಲ ಎಂದರು.
ಹೈಕಮಾಂಡ್ ಹೇಳಿದರೆ ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿ
ಪಕ್ಷದ ಹೈಕಮಾಂಡ್ ಹೇಳಿದರೆ ಮಾತ್ರ ಜ. ೨೨ ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುತ್ತೇವೆ. ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲಾ ಬದ್ಧ ಎಂದರು.
ಅಯೋಧ್ಯೆಯ ರಾಮಮಂದಿರಕ್ಕೆ ಜ. ೨೨ ರ ನಂತರ ಹೋಗುತ್ತೇನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ನನಗೆ ಮಾಹಿತಿ ಇಲ್ಲ. ಜ. ೨೨ ರ ನಂತರ ಅಯೋಧ್ಯೆಗೆ ಹೋಗುವ ಬಗ್ಗೆಯೂ ಹೈಕಮಾಂಡ್ ತೀರ್ಮಾನ ಮಾಡಬೇಕಾಗುತ್ತದೆ. ಹೈಕಮಾಂಡ್ ತೀರ್ಮಾನದಂತೆ ನಾವೆಲ್ಲಾ ನಡೆಯುತ್ತೇವೆ. ಹೈಕಮಾಂಡ್ ವಿರುದ್ಧ ನಾವು ನಿಲುವು ತೆಗೆದುಕೊಳ್ಳಲು ಆಗಲ್ಲ ಎಂದರು.