ಹಾವು ಕಚ್ಚಿ 6 ವರ್ಷದ ಬಾಲಕ ಸಾವು

ಕಲಬುರಗಿ,ನ.16:ಶಹಾಬಾದ ತಾಲೂಕಿನ ಗೋಳಾ (ಕೆ) ಗ್ರಾಮದಲ್ಲಿ ಹಾವು ಕಡಿದ ಪರಿಣಾಮ ಬಾಲಕನೊಬ್ಬ ಸಾವನಪ್ಪಿದ ಘಟನೆ ನಡೆದಿದೆ.
ಗೋಳಾ (ಕೆ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ನವೀನ್ ಮುರುಗೇಂದ್ರ ಬಡಿಗೇರ (6) ಎಂಬಾತನೇ ಮೃತಪಟ್ಟ ದುರ್ದೈವಿ.
ಮಧ್ಯಾಹ್ನ ಶಾಲೆಯಿಂದ ಬೇಗ ಮನೆಗೆ ಬಂದಿದ್ದ ಬಾಲಕ ನವೀನ್, ಊಟ ಮಾಡಿ ಮನೆಯಲ್ಲಿಯೇ ಮಲಗಿಕೊಂಡಿದ್ದನು.
ಈ ಸಂದರ್ಭದಲ್ಲಿ ಆತನ ಕಿವಿಗೆ ಎರಡು ಬಾರಿ ಹಾವು ಕಚ್ಚಿದೆ.ಆತ ಕಿರುಚಿಕೊಂಡಾಗ ಅಡುಗೆ ಮನೆಯಲ್ಲಿಯೇ ಇದ್ದ ತಾಯಿ ಓಡಿ ಬಂದು ನೋಡಿದ್ದಾಳೆ.ತಕ್ಷಣವೇ ಗಂಡನಾದ ಮುರುಗೇಂದ್ರ ಬಡಿಗೇರ್‍ಗೆ ತಿಳಿಸಿದ್ದಾಳೆ.
ತಕ್ಷಣವೇ ಮುರುಗೇಂದ್ರ ಹಾಗೂ ಗೆಳೆಯರು ಸೇರಿ ಶಹಾಬಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ವೈದ್ಯರು ಸೂಚಿಸಿದ್ದರು.
ತೀವ್ರ ಸ್ವರೂಪದಲ್ಲಿ ವಿಷ ಬಾಲಕನ ಶರೀರದೊಳಗೆ ಸೇರ್ಪಡೆಯಾದ ಕಾರಣ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ನವಿನ್ ಸಾವಿಗೀಡಾಗಿದ್ದಾನೆ. ಈ ಕುರಿತು ಶಹಾಬಾದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.