ಹಾವು ಕಚ್ಚಿ ವಿದ್ಯಾರ್ಥಿನಿ ಅಸ್ವಸ್ಥ: ಶಿಕ್ಷಕಿ ನಿರ್ಲಕ್ಷ್ಯ ಆರೋಪ

ಸಿರವಾರ,ಜು.೦೪-
ತಾಲೂಕಿನ ನಾರಬಂಡ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಯ ೩ ನೇ ತರಗತಿಯ ಕಾವೇರಿ ತಂದೆ ವೆಂಕಟೇಶ ನಾಯ್ಕ ಗೆ ನಲಿ ಕಲಿ ಕೊಠಡಿಯಲ್ಲಿ ಹಾವು ಕಚ್ಚಿದೆ.
ಸೋಮವಾರ ಮಧ್ಯಾಹ್ನ ನಲಿ ಕಲಿ ಆಟಿಕೆಗಳನ್ನು ತೆಗೆದುಕೊಳ್ಳುವಾಗ ಹಾವು ಕಚ್ಚಿದ್ದು, ಬಾಲಕಿ ಶಿಕ್ಷಕಿಗೆ ತಿಳಿಸಿದ್ದಾಳೆ. ಆಕೆಗೆ ಸಿರವಾರ ದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಇಒ ಆಸ್ಪತ್ರೆಗೆ ಭೇಟಿ: ಬಾಲಕಿಯ ಆರೋಗ್ಯ ವಿಚಾರಿಸಲು ಇಂದು ಬೆಳಿಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಾಲಕಿಗೆ ಯಾವುದೇ ಪ್ರಾಣಾಪಾಯವಿಲ್ಲ ಸುರಕ್ಷಿತವಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ’ಸಂಜೆವಾಣಿ’ ಗೆ ಮಾಹಿತಿ ನೀಡಿದರು.
ಶಿಕ್ಷಕಿ ಬೇಜವಾಬ್ದಾರಿ ಪಾಲಕರ ಆರೋಪ; ನಲಿಕಲಿ ಕೋಠಡಿಯಲ್ಲಿ ಆಟಿಕೆಗಳನ್ನು ತರಲು
ಬಾಲಕಿಯನ್ನು ಕಳಿಸಿದ ಶಿಕ್ಷಕಿ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಒಂದು ವೇಳೆ ಹತ್ತಾರು ವಿದ್ಯಾರ್ಥಿಗಳು ಕೋಠಡಿ ಪ್ರವೇಶಿಸಿದ್ದರೆ ಮಕ್ಕಳ ಪಾಡೇನು ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.