ಹಾವು ಕಚ್ಚಿ ಗ್ರಾಮ ಸಹಾಯಕ ಸಾವು

ಕಾಳಗಿ:ನ.8: ಹಾವು ಕಚ್ಚಿ, ಬಳಿಕ ನಾಟಿ ಚಿಕಿತ್ಸೆಗೆ ಸ್ಪಂದಿಸದೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗ್ರಾಮ ಸಹಾಯಕರೊಬ್ಬರು ಮೃತಪಟ್ಟಿರುವ ಘಟನೆ ಶನಿವಾರ ಬೆಳಗಿನ ಜಾವ ಅರಣಕಲ್ ಗ್ರಾಮದಲ್ಲಿ ಜರುಗಿದೆ.

ಅರಜಂಬಗಾ ಗ್ರಾಮದ ಮಲ್ಲು (ಮಲ್ಲಿಕಾರ್ಜುನ) ಗುರುಲಿಂಗಪ್ಪ ತಳವಾರ (27) ಮೃತಪಟ್ಟವರು.ಇವರು ಅರಣಕಲ್ ಗ್ರಾಮ ಸಹಾಯಕರಾಗಿ ಇದೇ ಊರಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ಹೊಲದಲ್ಲಿ ಹಾವು ಕಚ್ಚಿದೆ. ಬಳಿಕ ಸ್ಥಳೀಯವಾಗಿ ನಾಟಿ ಔಷಧಿ ನೀಡಲಾಗಿದೆ. ಆದರೆ, ಇದು ಪ್ರಯೋಜನವಾಗದೆ ಚಿಕಿತ್ಸೆಗಾಗಿ ಕಾಳಗಿ ಆಸ್ಪತ್ರೆಗೆ ಕರೆ ತರುವಾಗ ಬೆಳಗಿನ ಜಾವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಶನಿವಾರ ಕಾಳಗಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ, ಅರಜಂಬಗಾ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಾಸಕ ಡಾ.ಅವಿನಾಶ ಜಾಧವ, ತಹಶೀಲ್ದಾರ್ ನೀಲಪ್ರಭಾ ಬಬಲಾದ ಭೇಟಿ ನೀಡಿದರು. ಘಟನೆ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.