ಹಾವು ಕಚ್ಚಿ ಇಬ್ಬರು ರೈತರ ಸಾವು

ಅಫಜಲಪುರ:ನ.2: ಅಫಜಲಪುರ ತಾಲೂಕಿನ ಬಳೂರ್ಗಿ ಹಾಗೂ ಮಾತೋಳಿ ಗ್ರಾಮಗಳಲ್ಲಿ ಒಂದೇ ದಿನ ರೈತರಿಬ್ಬರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಹಾವು ಕಚ್ಚಿ ಮೃತಪಟ್ಟ ಘಟನೆ ಜರುಗಿದೆ. ಬಳೂರ್ಗಿ ಗ್ರಾಮದ ರೈತ ಖಾಜಪ್ಪ ಬಸಣ್ಣ ಪೋತೆ(40) ರವಿವಾರ ಬೆಳಿಗ್ಗೆ 9.30ರ ಸುಮಾರಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಇದನ್ನು ಕಂಡ ರೈತ ಹೆದರದೆ ತನ್ನ ದ್ವಿಚಕ್ರ ವಾಹನದ ಮೇಲೆ ಊರಿಗೆ ಬಂದು ಸುದ್ದಿ ತಿಳಿಸಿದ್ದಾನೆ. ಹಾವು ಕಚ್ಚಿದ ಈತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮೃತ ರೈತನ ಪತ್ನಿ ಸರಸ್ವತಿ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಮಾತೋಳಿ ಗ್ರಾಮದಲ್ಲಿ ರೈತ ಚಂದ್ರಶಾ ತಂದೆ ಶಿವಯೋಗಪ್ಪ ಪಾಸೋಡಿ(35) ಶನಿವಾರ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಾಯಂಕಾಲ 5 ಗಂಟೆ ಸುಮಾರಿಗೆ ಹಾವು ಕಚ್ಚಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ರಾತ್ರಿ 11ಕ್ಕೆ ಮೃತ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‍ಐ ವಿಶ್ವನಾಥ ಮುದರೆಡ್ಡಿ ಭೇಟಿ ನೀಡಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.