ಹಾವಿನ ಸಂತತಿ ನಾಶದಿಂದ ರೈತರಿಗೆ ನಷ್ಟ -ಸ್ಫೂರ್ತಿ

ಕೂಡ್ಲಿಗಿ.ಜ.10:- ರೈತ ಬೆಳೆದ ಬೆಳೆ ಹಾಗೂ ಫಸಲನ್ನು ಹಾಳು ಮಾಡುವ ಇಲಿ ಹೆಗ್ಗಣಗಳ ಬಿಲದಲ್ಲಿ ನುಗ್ಗಿ ಅವುಗಳನ್ನು ತಿಂದು ರೈತನ ಬೆಳೆ ಉಳಿಸುವ ಏಕೈಕ ವನ್ಯಜೀವಿ ಹಾವು ಅದರ ಸಂತತಿ ನಾವು ಯಾವುದೋ ಕಾರಣಕ್ಕೆ ನಾಶಮಾಡಿದಲ್ಲಿ ನಮ್ಮ ರೈತಸ್ನೇಹಿ ಕಳಕೊಂಡು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಂಗಳೂರು ನಾನು ಮತ್ತು ಹಾವು ಸಂಸ್ಥೆಯ ಸ್ಫೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲೂಕಿನ ನಾಗಲಾಪುರ ಗ್ರಾಮದ ಶಾಲೆಯೊಂದರಲ್ಲಿ ಗ್ರಾಮದ ಜನತೆ ಹಾಗೂ ಮಕ್ಕಳಿಗೆ ಬಳ್ಳಾರಿ ಅರಣ್ಯವಿಭಾಗ, ಕೂಡ್ಲಿಗಿ ಉಪವಿಭಾಗದಿಂದ ಆಯೋಜಿಸಲಾಗಿದ್ದ ಅರಣ್ಯ ಮತ್ತು ವನ್ಯಜೀವಿ ಸಂಕುಲವನ್ನು ಕಾಡ್ಗಿಚ್ಚಿನಿಂದ ರಕ್ಷಿಸುವುದು ಹಾಗೂ ವನ್ಯಜೀವಿ ಮತ್ತು ಮಾನವ ನಡುವಿನ ಸಂಘರ್ಷ ತಡೆಗಟ್ಟುವ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ದೇಶದಲ್ಲಿ ವರ್ಷಕ್ಕೆ ಮಾನವನ ಮುಂಜಾಗ್ರತೆ ಇಲ್ಲದೆ 50ಸಾವಿರ ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ ಒಂದು ಲಕ್ಷಕ್ಕೂ ಅಧಿಕವಾಗಿ ಅಂಗವಿಕಲರಾಗಿದ್ದಾರೆ ಹಾವು ಕಡಿತದ ಭಯದಿಂದ ಸತ್ತವರ ಸಂಖ್ಯೆಯೇ ಜಾಸ್ತಿ ಇದ್ದು ಕೇವಲ ನಾಲ್ಕು ಸಂತತಿ ವಿಷಪೂರಿತ ಹಾವುಗಳಿವೆಯಷ್ಟೆ ಎಂದರು ಹಾವು ಕಡಿತದಿಂದ ತಪ್ಪಿಸಿಕೊಳ್ಳಲು ಮಾಡಬೇಕಾದ ಮುಂಜಾಗ್ರತೆ ಅವುಗಳಿಂದ ರಕ್ಷಣೆ ಹೇಗೆ ಹಾವು ಕಡಿದ ವ್ಯಕ್ತಿ ಉಳಿಸಲು ಮಾಡಬೇಕಾದ ಮುಂಜಾಗ್ರತೆ ಏನೂ ಎಂಬುದರ ಬಗ್ಗೆ ಗ್ರಾಮದ ಜನತೆಗೆ ಮನಮುಟ್ಟುವ ಹಾಗೆ ಸ್ಫೂರ್ತಿ ತಿಳಿಸಿದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ನಾನು ಮತ್ತು ಹಾವು ಸಂಸ್ಥೆಯ ಮುಖ್ಯಸ್ಥ ವಿಪಿನ್ ರಾಯ್ ಮಾತನಾಡಿ ವನ್ಯಜೀವಿಗಳಿಗೂ ಮನುಷ್ಯನಂತೆ ಬದುಕಲು ಹಕ್ಕಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು, ಪ್ರಾಣಿಗಳಿಗೂ ಭಾವನೆಗಳಿವೆ ಆ ಭಾವನೆಗಳನ್ನರಿತು ನಾವು ಅರಣ್ಯದಲ್ಲಿ ನಡೆದುಕೊಳ್ಳಬೇಕು ಆದನ್ನು ಬಿಟ್ಟು ಪ್ರಾಣಿಗಳನ್ನು ಕೊಲ್ಲುವ, ಅರಣ್ಯನಾಶ ಮಾಡುವತ್ತ ಮನುಷ್ಯ ಹೋದರೆ ಮುಂದಿನ ದಿನಗಳಲ್ಲಿ ಮನುಷ್ಯನ ವಿನಾಶವೂ ಆಗುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಇತ್ತೀಚಿಗಂತೂ ಮಾನವ ಮತ್ತು ಮನುಷ್ಯನ ಮದ್ಯೆ ಸಂಘರ್ಷ ಏರ್ಪಟ್ಟಿದ್ದು ಕರಡಿ,ಚಿರತೆ, ಹುಲಿಗಳು ಮಾನವನ ಮೇಲೆ ಧಾಳಿ ಮಾಡುತ್ತಿರುವುದು ಮಾನವ ಪ್ರಾಣಿಗಳನ್ನು ಕೊಲ್ಲಲು ಸಂಚ ರೂಪಿಸುತ್ತಿರುವುದು ಸರಿಯಾದ ಕ್ರಮವಲ್ಲ ಕಾಡುಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳಲು ಪ್ರಾಣಿಗಳು ಬದುಕಲು ಕಾಡುಗಳಲ್ಲಿ ಮನುಷ್ಯನ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು.
ಉಪ ಅರಣ್ಯಾಧಿಕಾರಿ ಪ್ರಶಾಂತ ಯಾದವ ಮಾತನಾಡಿ ಅರಣ್ಯ ಪ್ರದೇಶದಲ್ಲಾಗುವ ಕಾಡ್ಗಿಚ್ಚಿನಿಂದ ವನ್ಯಜೀವಿಗಳ ಪ್ರಾಣರಕ್ಷಣೆ ಅರಣ್ಯಪ್ರದೇಶದ ಸಮೀಪವಿರುವ ಗ್ರಾಮಗಳ ಜನತೆಯ ಮುಂಜಾಗ್ರತಾ ಕ್ರಮಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಮತ್ತು ಗುಡೇಕೋಟೆ ವಲಯ ಅರಣ್ಯಾಧಿಕಾರಿ ರೇಣುಕಾ, ಕೂಡ್ಲಿಗಿ ಉಪಅರಣ್ಯಾಧಿಕಾರಿ ಕುಬೇರ, ಅರಣ್ಯರಕ್ಷಕರಾದ ನಾಗರಾಜತರಗಾರ್, ಗೋವಿಂದಪ್ಪ, , ಗಂಗಾಧರ, ಅರಣ್ಯ ವೀಕ್ಷಕರಾದ ನಾಗರಾಜ, ಪಂಪಯ್ಯ ಹಾಗೂ ಗಣೇಶ ಹಾಗೂ ಮುಂತಾದವರು ಇದ್ದರು.