
ಅಫಜಲಪುರ:ನ.6: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್ ತಿಳಿಸಿದರು.
ತಾಲೂಕಿನ ಹಾವನೂರ ಗ್ರಾಮದಲ್ಲಿ ಪ್ರಫುಲ್ಲತಾ ಫೌಂಡೇಶನ್, ರೋಟರಿ ಕ್ಲಬ್, ದರ್ಶ ಹಾಸ್ಪಿಟಲ್, ನವಜೀವನ ಹಾಸ್ಪಿಟಲ್, ಇನ್ನರ್ ವ್ಹಿಲ್ ಕ್ಲಬ್, ಗುಲಬರ್ಗಾ ಸೌತ್ ಸಿಟಿ ಸಹಭಾಗಿತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಿನ ಕಾಲಘಟ್ಟದಲ್ಲಿ ಮನುಷ್ಯ ತನ್ನ ಒತ್ತಡದ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮಾನಸಿಕ ಒತ್ತಡ, ಶುಗರ್ ,ಬಿಪಿ ಸೇರಿದಂತೆ ಹಲವಾರು ಕಾಯಿಲೆಗಳನ್ನು ಹೊಂದಿರುತ್ತಾರೆ. ಕಾಲ ಕಾಲಕ್ಕೆ ತಪಾಸಣೆ ಹಾಗೂ ವೈದ್ಯರ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೆ ಪತ್ತೆ ಹಚ್ಚಿ ಗುಣಪಡಿಸಬಹುದು ಎಂದ ಅವರು ಹಾವನೂರ ಗ್ರಾಮದ ಸುತ್ತುಮುತ್ತಲಿನ ಭಾಗದ ಜನರು ಇದರ ಸದುಪಯೋಗ ಪಡೆಯಲೆಂದು ಈ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಶಿರಾವ ಪಾಸೋಡಿ, ಪ್ರಕಾಶ ಕುಲಕರ್ಣಿ, ಪ್ರಭುಲಿಂಗ ಪಾಟೀಲ್, ಶುಂಭುಲಿಂಗ ಇಸ್ತ್ರಿ, ಪ್ರವೀಣ ಕುಲಕರ್ಣಿ, ಗುರು ಕೊರಬಾ, ವೈದ್ಯರಾದ ಡಾ.ಅಪರ್ಣಾ ಭದ್ರಶೆಟ್ಟಿ, ಡಾ.ಸುಷ್ಮಾ ಮುಕ್ಕಾ, ಡಾ.ವಿರೇಶ ಕೋರವಾರ, ಡಾ.ಶೀತಲ್ ಕೋರವಾರ, ಡಾ.ಸಚಿನ್ ಜೆ, ಡಾ.ಸುಪ್ರೀಯಾ ಅಣಕಲ್, ಡಾ.ರಾಹುಲ್ ಮಂದಕನಹಳ್ಳಿ, ಡಾ. ಭಾರ್ಗವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.