ಹಾಳ ತಡಕಲ: ಸಮುದಾಯ ಭವನ ಕಾಮಗಾರಿಗೆ ಶಾಸಕ ಸುಭಾಷ್ ಗುತ್ತೇದಾರ ಭೂಮಿ ಪೂಜೆ

ಕಲಬುರಗಿ:ಸೆ.5:ಕೋಲಿ ಸಮಾಜದ ಸಮುದಾಯದ ಅಭಿವೃದ್ಧಿಗಾಗಿ ಗ್ರಾಮದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕಾಗಿ 25 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಆಳಂದ ತಾಲೂಕಿನ ಹಾಳತಡಕಲ ಗ್ರಾಮದಲ್ಲಿ ಕೋಲಿ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಈಗಾಗಲೆ ಗ್ರಾಮದಲ್ಲಿ ಸಿಸಿ ರಸ್ತೆ, ಅಂಗನವಾಡಿ ಕಟ್ಟಡ, ಶಾಲಾ ಕೋಣೆಗಳು, ಆಸ್ಪತ್ರೆಗೆ ಕಂಪೌಂಡ್, ಚರಂಡಿ, ಗ್ರಂಥಾಲಯ, ಜಲಜೀವನ ಮಿಷನ್, ರಸ್ತೆ ಕಾಮಗಾರಿ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಮಂತ ನಾಮಣೆ, ಅಶೋಕ ಜಾಮದಾರ, ಶಿವಾ ಜಮಾದಾರ, ಅಶೋಕ ಹತ್ತರಕಿ, ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರಾದ ಅರುಣಕುಮಾರ ಸೇರಿದಂತೆ ಕೋಲಿ ಸಮಾಜದ ಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.