ಹಾಳೆ ಉದ್ಯಮಕ್ಕೆ ಹೊಸ ವಿನ್ಯಾಸದ ರೂಪ ಅಟೋಮೊಬೈಲ್ ಪದವೀಧರ ಯುವಕನ ‘ಯಶೋಗಾಥೆ’


ಪುತ್ತೂರು, ಡಿ.೧೯- ವಿದ್ಯಾಭ್ಯಾಸದ ನಂತರ ಖಾಸಗಿ ಕಂಪೆಗಳು ಅಥವಾ ಸರ್ಕಾರಿ ಉದ್ಯೋಗಕ್ಕೆ ಹಾತೊರೆಯುವ ಯುವಜನತೆಯ ನಡುವೆ ಸ್ವಂತ ಉದ್ದಿಮೆಯೊಂದನ್ನು ಪ್ರಾರಂಭಿಸಿ ಇದೀಗ ಯಶಸ್ಸಿನೆಡೆಗೆ ಸಾಗಿದ ಯುವಕರೊಬ್ಬರ ‘ಯಶೋಗಾಥೆ’ ಜಿಲ್ಲೆಯ ಯುವ ಜನತೆಗೆ ಕೈಗನ್ನಡಿಯಾಗಿದೆ.
ಜಿಲ್ಲೆಯಲ್ಲಿ ರೈತ ತನ್ನ ಸಾಂಪ್ರದಾಯಿಕವಾದ ಭತ್ತದ ಬೆಳೆಯನ್ನು ಬಿಟ್ಟು ಅಡಕೆ ಕೃಷಿ ಆರಂಭಿಸಿದ. ಈ ಅಡಕೆ ತೋಟದಲ್ಲಿ ಸಿಗುವ ಹಾಳೆಗಳನ್ನು ತಟ್ಟೆಗಳನ್ನಾಗಿಸಿ ಉಪಯೋಗ ಮಾಡುವ ಹಲವು ಉದ್ದಿಮೆಗಳು ಪ್ರಾರಂಭಗೊಂಡವು. ನೈಸರ್ಗಿಕವಾದ ಸಂಪನ್ಮೂಲವಾಗಿರುವ ಈ ಹಾಳೆಯಿಂದ ಸುಮಾರು ೬೦ ಬಗೆಯ ವಿವಿಧ ರೀತಿಯ ವಸ್ತುಗಳನ್ನು ತಯಾರಿಸುವ ಮೂಲಕ ಇದೀಗ ಹಾಳೆ ಉದ್ಯಮಕ್ಕೆ ಹೊಸ ರೂಪ ಕೊಟ್ಟಿರುವ ಈ ಯುವಕ ಪುತ್ತೂರು ತಾಲೂಕಿನ ಮಾಡಾವು ಸದಾಶಿವ ಎ ಮತ್ತು ಕೃಷ್ಣಪ್ರಭಾ ದಂಪತಿಗಳ ಪುತ್ರ ಶ್ರೀಕೃಷ್ಣ ಮಾಡಾವು.
ಸಾಮಾನ್ಯವಾಗಿ ಹಾಳೆಯಿಂದ ಊಟದ ತಟ್ಟೆ ಮಾಡುವ ಕಾಯಕ ಬಹುತೇಕ ಊರುಗಳಲ್ಲಿ ನಡೆಯುತ್ತಿವೆ. ಆದರೆ ಅದೇ ಹಾಳೆಯಿಂದ ಐಸ್ ಕ್ರೀಮ್ ಕಪ್, ಚಮಚ, ಸಾಬೂನು ಪೆಟ್ಟಿಗೆ, ಗೋಲ್ಡ್ ಕಾಯಿನ್ ಗಿಪ್ಟ್ ಬಾಕ್ಸ್, ಕಿಡ್ನಿ ಟ್ರೇ, ಸೂಪ್ ಬೌಲ್, ರೆಕ್ಟಾಂಗಲ್ ಟ್ರೇ, ಸಮೋಸ ಸೋಸ್ ಹಾಕುವ ಪುಟ್ಟ ಬಾಕ್ಸ್, ಮಸಾಲಪುರಿ, ಪಾನಿಪುರಿ ತಿನ್ನಲು ಬಳಕೆ ಮಾಡುವ ಪ್ಲೇಟ್ ಗಳು, ಟೂತ್ ಪೌಡರ್ ಬಾಕ್ಸ್.. ಹೀಗೆ ತರಾವಳಿಯಾಗಿರುವ ಹಾಳೆ ತಟ್ಟೆಯ ಉಪಕರಣಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಇವರು ಹಾಳೆ ತಟ್ಟೆ ಬಹುಪಯೋಗಿ ಎಂಬುವುದನ್ನು ಸಾಬೀತು ಮಾಡಿದ್ದಾರೆ.
೨೦೧೫ರಲ್ಲಿ ಈ ಉದ್ದಿಮೆಯನ್ನು ಪ್ರಾರಂಭಿಸಿದ ಈ ಅಟೋಮೊಬೈಲ್ ಪದವೀಧರ ಶ್ರೀಕೃಷ್ಣ ಮಾಡಾವು ಇದೀಗ ತನ್ನ ಮಾಡಾವಿನ ಪಾಲಿ ಹೌಸ್ ನಲ್ಲಿ ತಯಾರಾಗುವ ವಸ್ತುಗಳಿಗೆ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳ ಸಹಿತ ದೇಶದ ವಿವಿಧ ಭಾಗಗಳಲ್ಲಿ ಮಾರುಕಟ್ಟೆ ಹೊಂದಿದ್ದಾರೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ದಕ ಸೇರಿದಂತೆ ವಿವಿಧ ಊರುಗಳಲ್ಲಿ ತಾವು ತಯಾರಿಸಿದ ಹಾಳೆ ವಸ್ತುಗಳು ಜನತೆಗೆ ಉಪಯುಕ್ತ ಎಂಬುವುದನ್ನು ಸಾಬೀತುಗೊಳಿಸಿದ್ದಾರೆ.
ಹೋಟೆಲ್, ಚಾರ್ಟ್ಸ್ ಅಂಗಡಿಗಳು, ಐಸ್ ಕ್ರೀಮ್ ಪಾರ್ಲರ್ ಗಳಿಗೆ ಹೆಚ್ಚಾಗಿ ಉಪಯುಕ್ತವಾಗುವ ಈ ಹಾಳೆ ಉಪಕರಣಗಳು ಪ್ಲಾಸ್ಟಿಕ್ ವಿರೋಧದ ಹಿನ್ನಲೆಯಲ್ಲಿ ಹೆಚ್ಚು ಮಹತ್ವ ಪಡೆದುಕೊಂಡವು. ನೈಸರ್ಗಿಕ ನೆಲೆಯಲ್ಲಿ ಸಿಗುವ ಹಾಳೆ ಉಪಕರಣಗಳು ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಉಪಯುಕ್ತವಾಗಿವೆ. ಸಾಬೂನು ಬಾಕ್ಸ್ ಗಳಿಗೆ ಕೇರಳದಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇತ್ತು. ಕೇರಳದಲ್ಲಿ ಉಂಟಾದ ಪ್ರಾಕೃತಿಕ ಹಾನಿ, ಶಬರಿಮಲೆಗೆ ಯಾತ್ರೆಗಳು ಕಡಿಮೆಯಾದ ಹಿನ್ನಲೆಯಲ್ಲಿ ಇದೀಗ ಬೇಡಿಕೆ ಕಡಿಮೆಯಾಗಿದೆ. ಆದರೆ ವಸತಿಗೃಹಗಳಲ್ಲಿ ಇದಕ್ಕೆ ಬೇಡಿಕೆ ಇದೆ. ಈ ಹಾಳೆ ತಟ್ಟೆಯ ಉದ್ಯಮ ಭವಿಷ್ಯದಲ್ಲೂ ಬೇಡಿಕೆ ಇರುವ ಮಾಧ್ಯಮವಾಗಿದೆ ಎನ್ನುವುದು ಶ್ರೀಕೃಷ್ಣ ಮಾಡಾವು ಅವರ ಅಭಿಪ್ರಾಯ.
ಕಂಪೆನಿಗಳಲ್ಲಿಯೇ ಕೆಲಸ ಸಿಗಬೇಕು. ಸರ್ಕಾರಿ ಉದ್ಯಮವೇ ಆಗಬೇಕು ಎಂದು ಯೋಚಿಸುವ ಯುವಜನತೆಯ ಮಧ್ಯೆ ಊರಿನಲ್ಲಿಯೇ ಹಾಳೆ ತಟ್ಟೆ ಉದ್ಯಮವನ್ನು ಆರಿಸಿಕೊಂಡು ಅದರಲ್ಲಿಯೇ ಹೊಸತನಕ್ಕೆ ಮುಂದಾಗಿ ಯಶಸ್ವಿಯಾಗಿರುವ ಈ ಯುವ ಉದ್ಯಮಿ ಶ್ರೀಕೃಷ್ಣ ಮಾಡಾವು ಪ್ರಸ್ತು ಸ್ಥಳೀಯ ೮೦ ಅಡಕೆ ತೋಟಗಳಿಂದ ಹಾಳೆಗಳನ್ನು ಖರೀದಿ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ರೂ.೧೦ ಲಕ್ಷ ವೆಚ್ಚದ ಮೂಲಕ ಯೋಜನೆ ಪ್ರಾರಂಭಿಸಿದ್ದರೂ, ಹಾಳೆ ತಟ್ಟೆಗಳ ಬದಲಿಗೆ ತನ್ನ ಕನಸಿನ ಹೊಸ ರೂಪಗಳಿಗೆ ಹಾಳೆಯನ್ನು ಪರಿವರ್ತನೆಗೊಳಿಸುವ ಹಿನ್ನಲೆಯಲ್ಲಿ ಯಂತ್ರಗಳನ್ನು ತಾನೇ ಆಧುನೀಕರಣಗೊಳಿಸಿದ್ದಾರೆ. ಇದರ ಜತೆ ದೊಡ್ಡದಾದ ಕಟ್ಟಡವೊಂದನ್ನು ನಿರ್ಮಿಸಿಕೊಂಡು ಈ ವ್ಯವಸ್ಥೆಗೆ ಅಗತ್ಯವಾಗಿರುವ ಜನರೇಟರ್ ಅಳವಡಿಕೆ ಮಾಡಿದ್ದಾರೆ. ಹಾಗಾಗಿ ಈ ವ್ಯವಸ್ಥೆಗಳಿಗೆ ಸುಮಾರು ರೂ.೬೦ ಲಕ್ಷ ವೆಚ್ಚವಾಗಿದೆ. ಈ ಬಗೆ ಬಗೆಯ ವಿನ್ಯಾಸದ ಹಾಳೆ ಉಪಕರಣಗಳನ್ನು ವಿದೇಶಗಳಿಗೆ ರಫ್ತು ಮಾಡುವ ಯೋಚನೆಯೂ ಅವರಲ್ಲಿ ಇದೆ.