ಹಾಳಾದ ರಸ್ತೆ: ಸಂಚಾರವೇ ತಲೆನೋವು!

ಚಿತ್ತಾಪುರ: ಜು.26:ತಾಲೂಕಿನಿಂದ ಯರಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಮಾರ್ಗವು ಮುಂದೆ ಮಾಲಗತ್ತಿ, ಕದ್ದರಗಿ ಹಾಗೂ ಜೀವಣಗಿ, ಮುತ್ತಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಯರಗಲ್ ರಸ್ತೆ ಹದಗೆಟ್ಟಿದ್ದರಿಂದ ಬಹುತೇಕ ಜನರು ಈ ಮಾರ್ಗದಿಂದಲೇ ಸಂಚಾರ ಮಾಡುವ ಪರಿಸ್ಥಿತಿ ಉಂಟಾಗಿದೆ ಈ ಮಾರ್ಗದಲ್ಲಿ ನಾನಾ ಹಳ್ಳಿಗಳು ಬರುತ್ತವೆ. ಆದರೆ, ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ.

ರಸ್ತೆ ಹಾಳಾದ ಪರಿಣಾಮವಾಗಿ ಈ ಮಾರ್ಗವಾಗಿ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ. ಇದೇ ಮಾರ್ಗವಾಗಿ ಕದ್ದರಗಿಗೆ ಬಸ್ ವ್ಯವಸ್ಥೆ ಇತ್ತು. ಆದರೆ ಈಗ ವ್ಯವಸ್ಥೆ ಕಡಿತಗೊಳಿಸಿದ್ದಾರೆ. ಇದರಿಂದಾಗಿ ಕದರಗಿ ಗ್ರಾಮದ ಗ್ರಾಮಸ್ಥರು ಭಾಗೋಡಿ ಮಾರ್ಗವಾಗಿ ಸುತ್ತುವರೆದು ಚಿತ್ತಾಪುರಗೆ ಬರುವ ಪರಿಸ್ಥಿತಿ ಉಂಟಾಗಿದೆ.

ಗ್ರಾಮದ ಡಾಂಬರ್ ಸಂಪೂರ್ಣ ಕಿತ್ತೋಗಿದೆ. ರಸ್ತೆಗೆ ಹಾಕಿದ ಕಂಕರ್ ಕಲ್ಲುಗಳು ಮೇಲೆದ್ದಿವೆ.
ಈ ಹಿಂದೆ ಲಕ್ಷಗಟ್ಟಲೆ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಅರೆಬರೆ ಕೆಲಸ ಮಾಡಿದ್ದರಿಂದ ಒಂದು ವರ್ಷದಲ್ಲೇ ಸಂಪೂರ್ಣ ರಸ್ತೆ ಹಾಳಾಗಿದೆ.
ರಸ್ತೆ ನಿರ್ವಹಣೆ ಅವಧಿ ಪೂರ್ಣಗೊಳ್ಳದೇ ಇದ್ದರೂ, ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು, ಆಯಾ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಸಂಘ ಸಂಸ್ಥೆಗಳು ಈ ರಸ್ತೆ ಬಗ್ಗೆ ಧ್ವನಿ ಎತ್ತದ ಪರಿಣಾಮ ಈ ರಸ್ತೆಲ್ಲಿ ತಿರುಗಾಡುವ ವಾಹನ ಚಾಲಕ, ಪ್ರಯಾಣಿಕರು ಮಾತ್ರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಯರಗಲ್ ಗ್ರಾಮದ ಹಾಳಾದ ರಸ್ತೆಗೆ ಡಾಂಬರೀಕರಣ ರಸ್ತೆ ಮಾಡಿಸಿ ಅನುಕೂಲ ಮಾಡಿಕೊಡುತ್ತಾರೆ ಕಾದು ನೋಡಬೇಕಾಗಿದೆ.

ಒಂದು ವೇಳೆ ನಿರ್ಲಕ್ಷತನ ತೋರಿದಲ್ಲಿ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.


ರಸ್ತೆ ದುರಸ್ತಿ ಇಲ್ಲದೇ ಊರಿಗೆ ಹೋಗಲು ಸಾಕಷ್ಟು ಸಮಯ ಬೇಕಾಗುತ್ತದೆ. ರಸ್ತೆ ಹಾಳಗಿರುವುದರಿಂದ ಬೈಕ್ ನಡೆಸಲು ಹಾಗುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳಿಗೆ ರಸ್ತೆಯ ಬಗ್ಗೆ ಕಾಳಜಿ ಇಲ್ಲದಂತಾಗಿದೆ.

  • ರಮೇಶ್ ಗುತ್ತೇದಾರ್
    ಯರಗಲ್ ಗ್ರಾಮದ ಗ್ರಾಮಸ್ಥ.

ಈ ರಸ್ತೆ ಮೇಲೆ ನಡೆದಾಡಿ ನಮ್ಮ ಕಾಲುಗಳು, ಕೈಗಳು, ಸೊಂಟ ಬಿದ್ದು ಹೋಗಿವೆ. ರಸ್ತೆ ಸಮಸ್ಯೆ ಮಾತ್ರ ಸರಿಯಾಗುತ್ತಿಲ್ಲ. ಮೇಲಿಂದ ಕೆಳಗಿನವರೆಗೆ ಎಲ್ಲ ಅಧಿಕಾರಿಗಳು ಲಂಚಕ್ಕೆ ಬಿದ್ದಿದ್ದಾರೆ. ಲಂಚ ಪಡೆದರೆ ಯಾವ ರಸ್ತೆ ಶುದ್ಧವಾಗುತ್ತದೆ. ನಮ್ಮ ಹಣೆ ಬರಹ ಏನು ಮಾಡಲಿಕ್ಕೆ ಹಾಗೋದಿಲ್ಲ.

-ಸಂಜಯ್ ಕಾರ್ತಿಕ್ ರಾಠೋಡ್.
ಯರಗಲ್ ಗ್ರಾಮದ ಗ್ರಾಮಸ್ಥ.