ಹಾಳಾದ ರಸ್ತೆ: ಕಣ್ಣೆತ್ತಿ ನೋಡದ ಲೋಕೋಪಯೋಗಿ ಇಲಾಖೆ


ಲಕ್ಷ್ಮೇಶ್ವರ, ನ30: ತಾಲೂಕಿನ ಗೋನಾಳ ಗ್ರಾಮದಿಂದ ಶಿಗ್ಲಿಗೆ ಸಂಪರ್ಕ ಕಲ್ಪಿಸುವ 5 ಕಿಲೋಮೀಟರ್ ರಸ್ತೆ ಸ್ಥಿತಿ ಅಯೋಮಯವಾಗಿದ್ದು ಜಿಪಿಎಸ್ ಹಾಕಿ ರಸ್ತೆ ಹುಡುಕಿದರು ಒಂದಿಂಚು ಸಿಗುವುದಿಲ್ಲ.
ಕಳೆದ ಒಂದು ವರ್ಷದಿಂದಲೂ ಲೋಕೋಪಯೋಗಿ ಇಲಾಖೆಯ ರಸ್ತೆ ಅನಾಥವಾಗಿದ್ದು ಇಲಾಖೆಯವರು ಈ ರಸ್ತೆಯನ್ನು ಕಣ್ಣೆತ್ತಿ ಸಹ ನೋಡಲು ಬಂದಿಲ್ಲ. ಜನರು ಶಿಗ್ಲಿ ಮುಖಾಂತರ ಗೋನಾಳಕ್ಕೆ ಹೋಗಿ ಅಲ್ಲಿಂದ ಯಲವಗಿ ಸವಣೂರು ಮುಂತಾದ ಪ್ರದೇಶಗಳಿಗೆ ತಲುಪುತ್ತಿದ್ದರು.
ಆದರೆ ರಾಜ್ಯ ಹೆದ್ದಾರಿ ಬಾದಾಮಿ ಕೈಗಾ ರಸ್ತೆಗೆ ಸಂಪರ್ಕ ಕಲ್ಪಿಸುವ ಗೋನಾಳ ಶಿಗ್ಲಿ ರಸ್ತೆಯು ಸಂಪರ್ಕವನ್ನೇ ಕಳೆದುಕೊಂಡಿದ್ದು ಎಲ್ಲರೂ ರಸ್ತೆಯನ್ನು ಬಿಟ್ಟು, ಪರ್ಯಾಯವಾಗಿ ಮಾರ್ಗಗಳನ್ನು ಸಂಚರಿಸುತ್ತಿದ್ದಾರೆ.
ಒಟ್ಟಾರೆ ಗದಗ ಜಿಲ್ಲೆಯ ನರಗುಂದ ಕ್ಷೇತ್ರದ ಶಾಸಕರಾದ ಸಿ.ಸಿ. ಪಾಟೀಲ್ ಅವರು ಲೋಕೋಪಯೋಗಿ ಸಚಿವರಾಗಿದ್ದರು. ಜಿಲ್ಲೆಯಲ್ಲಿನ ರಸ್ತೆಗಳಿಗೆ ಹಿಡಿಮಣ್ಣು ಹಾಕದ ಸ್ಥಿತಿ ಬಂದಿರುವುದು ದುರ್ದೈವ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಇದೇ ರೀತಿ ರಸ್ತೆಗಳ ನಿರ್ಲಕ್ಷ ಮುಂದುವರೆದರೆ ಇಲಾಖೆ ಇದ್ದರೂ ಇಲ್ಲದಂತಾಗುವ ಸ್ಥಿತಿ ನಿರ್ಮಾಣವಾದರೆ ಅಚ್ಚರಿಪಡಬೇಕಿಲ್ಲ.