ಹಾಲ್‌ಟಿಕೆಟ್ ನೀಡದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ

ಮೈಸೂರು,ಸೆ.೫- ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೊಬ್ಬಳು ಪರೀಕ್ಷೆಗೆ ಹಾಲ್ ಟಿಕೆಟ್ ನೀಡದೆ ಸತಾಯಿಸುತ್ತಿರುವುದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಯಲಕ್ಷ್ಮೀಪುರಂನಲ್ಲಿ ನಡೆದಿದೆ.
ಸೆಂಟ್ ಜೋಸೆಫ್ ಕಾಲೇಜಿನ ತನ್ಮಯಾ ಬ್ಲೇಡ್‌ನಿಂದ ಕೈ ಕುಯ್ದುಕೊಂಡು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಲೇಜಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ತರಗತಿಗಳಿಗೆ ಹಾಜರಾಗುತ್ತಿದ್ದರೂ ಹಾಜರಾತಿ ನೀಡುತ್ತಿಲ್ಲ. ಹಾಲ್‌ಟಿಕೆಟ್ ನೀಡಲು ಹಣ ಕೊಡುವಂತೆ ಪೀಡಿಸುತ್ತಾರೆ. ಕೊಟ್ಟ ಹಣಕ್ಕೆ ಯಾವುದೇ ರಶೀದಿ ಕೊಡುತ್ತಿಲ್ಲ ಎಂದು ವಿದ್ಯಾರ್ಥಿನಿ ವಿಡಿಯೋ ಮಾಡಿ ಸಾವಿಗೆ ಕಾರಣ ತಿಳಿಸಿದ್ದಾಳೆ.
ವಿಡಿಯೋದಲ್ಲಿ ಏನಿದೆ?:
ಕಾಲೇಜಿನ ಪ್ರಾಂಶುಪಾಲರು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲಾ, ನಮ್ಮ ಭವಿಷ್ಯ ಹಾಳಾಗುತ್ತೆ ಅಂದ್ರು ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ದಿನಾಲು ತರಗತಿಗಳಿಗೆ ಹಾಜರಾಗುತ್ತಿದ್ದರೂ, ಹಾಜರಾತಿ ನೀಡುತ್ತಿಲ್ಲಾ.ಹಾಲ್ ಟಿಕೆಟ್ ಕೊಡೋದಕ್ಕೆ ದುಡ್ಡು ಕೇಳ್ತಿದ್ದಾರೆ. ದುಡ್ಡು ಕೊಟ್ಟರೆ ಯಾವುದೇ ರಶೀದಿ ಕೊಡುತ್ತಿಲ್ಲ. ಒಂದು ವರ್ಷ ಹಾಳಾಗುತ್ತೆ ಅಂದರೂ ನನ್ನ ಕಷ್ಟ ಪ್ರಾಂಶುಪಾಲರು ಅರ್ಥ ಮಾಡಿಕೊಳ್ಳುತ್ತಿಲ್ಲ.
ಒಂದು ವಾರದಿಂದ ಪ್ರಾಂಶುಪಾಲರ ಬಳಿ ಅಂಗಾಲಾಚಿ ಬೇಡಿಕೊಂಡರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲಾ. ಹೀಗಾಗಿ ನಾನು ತುಂಬಾ ನೊಂದಿದ್ದೇನೆ ನನ್ನ ಜೀವನಕ್ಕೆ ಅಂತ್ಯ ಹೇಳಲು ನಿರ್ಧರಿಸಿದ್ದೇನೆ.
ನನ್ನ ಸಾವಿಗೆ ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಕಾರಣ ಎಂದು ವಿದ್ಯಾರ್ಥಿನಿ ತನ್ಮಯಾ ವಿಡಿಯೋ ಜತೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಪ್ರಕರಣ ದಾಖಲು ಮಾಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.