ಹಾಲು, ಮೊಸರು 2 ರೂ ಹೆಚ್ಚಳ: ನಾಳೆ ಬೆಳಗ್ಗೆ ಯಿಂದಲೇ ಪರಿಷ್ಕೃತ ದರ ಜಾರಿ

ಬೆಂಗಳೂರು, ನ.23-ನಂದಿನಿ ಹಾಲು ಮತ್ತು ಮೊಸರು ಪ್ರತಿ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳವಾಗಲಿದೆ. ಪರಿಷ್ಕೃತ ದರಗಳು ನಾಳೆ ಬೆಳಿಗ್ಗೆಯಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.ಇದರೊಂದಿಗೆ ಹಾಲು ದರ ಏರಿಕೆ ಕುರಿತಂತೆ ಸರ್ಕಾರ ಮತ್ತು ಕೆಎಂಎಫ್ ನಡುವಣ ಹಗ್ಗ ಜಗ್ಗಾಟಕ್ಕೆ ಕಡೆಗೂ ತೆರೆಬಿದ್ದಿದೆ.
ಈ ಹಿಂದೆ ಹಾಲು ಮತ್ತು ಮೊಸರಿನ ದರವನ್ನು ಮೂರು ರೂಪಾಯಿಗೆ ಕೆಎಂಎಫ್ ಹೆಚ್ಚಿಸಿತ್ತು.‌ಈ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ಹಿಡಿದು ರೈತರು ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದರು.ಈ ಹಿನ್ನೆಲೆಯಲ್ಲಿ ಇಂದು ನಡೆದ ಕೆಎಂಎಫ್ ನಿರ್ದೇಶಕರ ಸಭೆಯಲ್ಲಿ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ದರವನ್ನು ಎರಡು ರೂಪಾಯಿಗೆ ಹೆಚ್ಚಿಸಲು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು.ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತದೆ.ಹೆಚ್ಚಳ ಮಾಡಿರುವ ದರದಲ್ಲಿ ಪೂರ್ತಿ ಹಣ ಹಾಲು ಉತ್ಪಾದಕರಿಗೆ ನೀಡಲು ಕೆಎಂಎಫ್​ ನಿರ್ಧರಿಸಿದೆ. ಈ ಮೂಲಕ ರೈತರಿಗೆ ಪ್ರತಿ ಲೀಟರ್​ ಹಾಲಿಗೆ 31ರಿಂದ 32 ರೂಪಾಯಿ ಸಿಗಲಿದೆ. ಹಾಲು ಉತ್ಪಾದಕರಿಗೆ ಪ್ರಸ್ತುತ 29 ರೂಪಾಯಿ ನೀಡಲಾಗುತ್ತಿತ್ತು. ಒಂದೊಂದು ಒಕ್ಕೂಟ ಒಂದೊಂದು ದರ ನಿಗದಿ ಮಾಡಿದೆ ಎಂದರು.

  • ನಂದಿನಿ ಟೋನ್ಡ್ ಹಾಲು ಲೀಟರ್ ಗೆ 37ರಿಂದ 39 ರೂಪಾಯಿಗೆ ಏರಿಕೆ
  • ಹೋಮೋಜಿನೈಸ್ಡ್ ಟೋನ್ಡ್ ಹಾಲು 38ರಿಂದ 40 ರೂಪಾಯಿಗೆ ಹೆಚ್ಚಳ
  • ಹೋಮೋಜಿನೈಸ್ಡ್ ಹಸುವಿನ ಹಾಲು 42ರಿಂದ 44 ರೂಪಾಯಿಗೆ ಹೆಚ್ಚಳ
  • ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43ರಿಂದ 45 ರೂಪಾಯಿಗೆ ಏರಿಕೆ
  • ಹೋಮೋಜಿನೈಸ್ಡೇ ಸ್ಟ್ಯಾಂಡರ್ಡ್ ಹಾಲು 44ರಿಂದ 46 ರೂಪಾಯಿಗೆ ಏರಿಕೆ
  • ನಂದಿನಿ ಸಮೃದ್ಧಿ ಹಾಲು 48ರಿಂದ 50 ರೂಪಾಯಿಗೆ ಏರಿಕೆ
  • ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50ರಿಂದ 52 ರೂಪಾಯಿಗೆ ಏರಿಕೆ
  • ಮೊಸರು ಒಂದು ಲೀಟರ್ ಗೆ 45ರಿಂದ 47 ರೂಪಾಯಿಗೆ ಏರಿಕೆ ರೂಪಾಯಿ ಏರಿಕೆಯಾಗಿದೆ.