ಹಾಲು, ಮೊಸರುಗಳ ದರ ಹೆಚ್ಚಳಕ್ಕೆ ಎಸ್‍ಯುಸಿಐ(ಸಿ) ಖಂಡನೆ

ಕಲಬುರಗಿ,ನ.24: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಯು ನಂದಿನಿ ಬ್ರ್ಯಾಂಡ್‍ನ ಎಲ್ಲಾ ಮಾದರಿಯ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‍ಗೆ 2 ರೂ. ಗಳನ್ನು ಹೆಚ್ಚಿಸಿರುವುದನ್ನು ಎಸ್‍ಯುಸಿಐ(ಸಿ) ಜಿಲ್ಲಾ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಕರ್ನಾಟಕ ಸರ್ಕಾರವು ಈ ಬೆಲೆ ಏರಿಕೆಯನ್ನು ತಡೆಗಟ್ಟುವುದರ ಬದಲು ಅನುಮೋದನೆ ನೀಡಿರುವುದು ಅತ್ಯಂತ ಖಂಡನಾರ್ಹ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ವಿ. ದಿವಾಕರ್ ಅವರು ತಿಳಿಸಿದ್ದಾರೆ.
ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಂದರ್ಭದಲ್ಲೂ ಒಂದಲ್ಲ ಒಂದು ಸಬೂಬು ಹೇಳುವುದು ಎಲ್ಲ ಜನವಿರೋಧಿ ಸರ್ಕಾರಗಳ ವಾಡಿಕೆ. ಅಂತೆಯೇ ಈ ಸಂದರ್ಭದಲ್ಲೂ ರೈತರಿಗೆ ನೆರವು ನೀಡಬೇಕೆಂದು ಕುಂಟು ನೆಪವೊಡ್ಡಿ ಹಾಲು, ಮೊಸರಿನ ದರ ಏರಿಸುವುದರ ಮೂಲಕ ಈಗಾಗಲೇ ಸಂಕಷ್ಟದಲ್ಲಿರುವ ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನರ ಹೆಗಲ ಮೇಲೆ ಭಾರ ಹೊರಿಸಿರುವುದು, ಸರ್ಕಾರದ ಅತ್ಯಂತ ಜನ ವಿರೋಧಿ ನಿಲುವನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಸರ್ಕಾರ ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುವ ಕ್ರಮಗಳನ್ನು ಕೈ ಬಿಟ್ಟು ತನ್ನ ಖಜಾನೆಯಿಂದ ರೈತರಿಗೂ ಸಹಾಯ ಧನ ನೀಡಿ ಅವರ ಸಂಕಷ್ಟಗಳನ್ನು ನಿವಾರಿಸಬೇಕು. ಅಂತೆಯೇ ಗ್ರಾಹಕರಿಗೂ ಬೆಲೆ ಹೆಚ್ಚಳವಾಗದಂತೆ ಸಹಾಯಧನ ನೀಡುತ್ತಾ ಉತ್ಪಾದನಾ ವೆಚ್ಚವನ್ನೂ ಸರಿದೂಗಿಸಬೇಕು. ಜನಸಾಮಾನ್ಯರಿಗೆ ನೆರವಾಗಲು ಬಳಸಬೇಕಾದ ಇಂತಹ ಹಣವನ್ನು ಕಾರ್ಪೋರೇಟ್ ಮನೆತನಗಳಿಗೆ ತೆರಿಗೆ ವಿನಾಯಿತಿ, ಸಹಾಯಧನ ನೀಡಲು ವಿನಿಯೋಗಿಸುತ್ತಿರುವುದನ್ನು ನಿಲ್ಲಿಸಬೇಕು. ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗಗಳಿಂದ ತತ್ತರಿಸುತ್ತಿರುವ ಬಡಜನರ ಜೇಬಿಗೆ ಕನ್ನಾ ಹಾಕುವ ನೀತಿಗಳನ್ನು ಕೈಬಿಟ್ಟು ಜನರ ಜೀವನವನ್ನು ಸುಧಾರಿಸುವ ನೀತಿಗಳನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹಾಗೆಯೇ ಸರ್ಕಾರದ ಈ ಜನ ವಿರೋಧಿ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಹೋರಾಡಲು ಜಿಲ್ಲೆಯ ಜನತೆ ಮುಂಬರಬೇಕೆಂದು ಅವರು ಕರೆ ನೀಡಿದ್ದಾರೆ.