ಹಾಲು ಒಕ್ಕೂಟ ಅಕ್ರಮ; ವಿಶೇಷ ತಂಡ ರಚನೆಗೆ ರೈತ ಸಂಘ ಆಗ್ರಹ

ಮುಳಬಾಗಿಲು:ಡಿ.೨೫- ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸೂಟ್‌ಕೇಸ್ ನಲ್ಲಿ ಕಳೆದುಹೋಗಿರುವ ಬಡವರ ಉದ್ಯೋಗವನ್ನು ಹುಡುಕಿಕೊಟ್ಟು ಆಯ್ಕೆಯಾಗಿ ಆಭ್ಯರ್ಥಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಒಕ್ಕೂಟದಲ್ಲಿ ನಡೆಯುತ್ತಿರುವ ಆಕ್ರಮಗಳಿಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಬೇಕೆಂದು ಸಹಕಾರ ಸಚಿವರನ್ನು ಒತ್ತಾಯಿಸಿ ಡಿ.೨೮ ರ ಗುರುವಾರ ಹಸುಗಳು ಸೂಟ್‌ಕೇಸ್ ಸಮೇತ ಒಕ್ಕೂಟ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ನಗರದ ಹೃದಯ ಭಾಗದಲ್ಲಿರುವ ಹಾಲು ಒಕ್ಕೂಟದ ಉಪ ಕಚೇರಿ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಲಕ್ಷಾಂತರ ರೈತ ಕುಟುಂಬಗಳ ಸ್ವಾಭಿಮಾನದ ಬದುಕು ಕಲ್ಪಿಸಿರುವ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿನೇ ದಿನೇ ನಷ್ಟದ ಜೊತೆಗೆ ಆಕ್ರಮಗಳ ಕೂಟವಾಗಿ ಮಾರ್ಪಡು ಮಾಡುತ್ತಿರುವ ಆಡಳಿತ ಮಂಡಳಿಗೆ ಲಂಗು ಲಗಾಮಿಲ್ಲದೆ ಕುದುರೆಯಂತಾಗಿದೆ ಎಂದು ಅವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ರೈತರಿಂದ ಆಯ್ಕೆ ಆಗಿರುವ ನಿರ್ದೇಶಕರೇ ಹಾಗೂ ರೈತರ ಪರಿಶ್ರಮದಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುತ್ತಿರುವ ನಿರ್ದೇಶಕರೇ ನೀವು ಪಾರದರ್ಶಕವಾಗಿದ್ದರೆ ಅಮೃತಕ್ಕೆ ಸಮಾನವಾದ ಹಸುವಿನ ಹಾಲನ್ನು ಕರೆದು ಹಾಲಿನ ಮೇಲೆ ಪ್ರಮಾಣ ಮಾಡಿ ನೇಮಕಾತಿಯಲ್ಲಿ ಆಕ್ರಮ ನಡೆದಿಲ್ಲ ಎಂದು ಸಾಬೀತು ಮಾಡಿ ಒಕ್ಕೂಟದ ಮೇಲೆ ಇರುವ ಆರೋಪವಿಲ್ಲ ಎಂದು ಸಾಬೀತು ಮಾಡಿ ಎಂದು ಒಕ್ಕೂಟದ ಅದ್ಯಕ್ಷರಿಗೆ ನಿರ್ದೇಶಕರಿಗೆ ಸಭೆಯಲ್ಲಿ ಸವಾಲು ಹಾಕಿದರು.
ರಾಜ್ಯಾಂದ್ಯಂತ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಆಕ್ರಮಗಳಿಂದ ನಿಷ್ಠಾಂವಂತ ಬಡ ರೈತ ಕೂಲಿಕಾರ್ಮಿಕರು ಮಕ್ಕಳು ಹಗಲು ರಾತ್ರಿ ಕಷ್ಟ ಪಟ್ಟು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ ಬರೆದ ಪರೀಕ್ಷೆಗಳು ಹಾಗೂ ಹುದ್ದೆಗಳು ಲಕ್ಷ ಕೋಟಿ ಲೆಕ್ಕದಲ್ಲಿ ಸಾರ್ವಜನಿಕವಾಗಿ ಹರಾಜು ಹಾಕಿ ಬಡವರ ಶ್ರಮವನ್ನು ಕಸಿಯುತ್ತಿರುವ ದಂದೆಕೋರರ ವಿರುದ್ದ ಕ್ರಮವಿಲ್ಲದ ಮದ್ಯೆ ಹಾಲು ಒಕ್ಕೂಟದಲ್ಲಿ ಖಾಲಿಯಿರುವ ೨೮೧ ಹುದ್ದೆಗಳಲ್ಲಿ ೨೦೦ ಹುದ್ದೆಗಳ ನೇಮಕಾತಿಗೆ ಮಾನ್ಯ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಜೊತೆಗೆ ಉಳಿದ ೮೧ ಅಭ್ಯರ್ಥಿಗಳ ಲಿಖಿತ ಪರೀಕ್ಷೆ ಸಂದರ್ಶನ ಮುಗಿಯುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅದ್ಯಕ್ಷರು, ಉಪಮುಖ್ಯಮಂತ್ರಿಗಳು, ಜನಪ್ರತಿನಿದಿಗಳು ನಿರ್ದೆಶಕರ ಶಿಪಾರಸ್ಸು ಬಿಡುಗಡೆ ಪಟ್ಟಿ ನಿಷ್ಟಾವಂತ ಅಭ್ಯರ್ಥಿಗಳನ್ನು ಬಂದೂಕು ಇಲ್ಲದೆ ಕೊಲೆ ಮಾಡುವಂತಹ ಅಪರಾಧವಾಗಿದೆ ಎಂದು ಒಕ್ಕೂಟದ ಹಗಲು ದರೋಡೆ ವಿರುದ್ದ ಕಿಡಿ ಕಾರಿದರು.
ತಾಲ್ಲುಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರ ಜೀವನಾಡಿಯಾಗಿರುವ ಹಾಲು ಒಕ್ಕೂಟದ ಅದ್ಯಕ್ಷರು ನಿರ್ದೇಶಕರು ಕಾರ್ಮಿಕರ ಸ್ವಂತ ಆಸ್ತಿಯೇ? ಹಸುವಿನ ಮೇಲೆ ಬಂಡವಾಳ ಹಾಕಿಲ್ಲ, ಬರದಲ್ಲಿ ಮೇವು ಕೊಂಡಿಲ್ಲ, ಸಗಣಿ ಬಾಚಿ ಹಸ ತೊಳೆದು ಗಂಜಲದ ವಾಸನೆ ತಿಳಿಯದ ಚುನಾಯಿತ ಪ್ರತಿನಿದಿಗಳಿಗೆ ರೈತರ ಕಷ್ಟ ಗೊತ್ತಿಲ್ಲದೆ ಒಕ್ಕೂಟದ ಜನರ ಹಣವನ್ನು ವಿವಿದ ಅಭಿವೃಧ್ದಿ ಹೆಸರಿನಲ್ಲಿ ಲೂಟಿ ಮಾಡುವ ಜೊತೆಗೆ ನೇಮಕಾತಿಯಲ್ಲಿ ಕೋಟಿ ಕೋಟಿ ಲಂಚ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ಧಾರೆಂದು ಗಂಭೀರ ಆರೋಪ ಮಾಡಿದರು.
ಒಕ್ಕೂಟ ಭ್ರಷ್ಟಚಾರವಿಲ್ಲ ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಭ್ಯರ್ಥಿಗಳ ಆಯ್ಕೆ ಪಟ್ಟಿ ನಕಲಿ ಎಂದು ಸಾಬೀತು ಮಾಡಲು ಆಡಳಿತ ಮಂಡಲಿ ಪಾರದರ್ಶಕವಾಗಿ ಆಯ್ಕೆ ಆಗಿರುವ ಆಭ್ಯರ್ಥಿಗಳ ಪಟ್ಟಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಭಯವೇಕೆ? ನೀವು ಹರಿಶ್ಚಂದ್ರರಾದರೆ ಪಟ್ಟಿ ಬಿಡುಗಡೆ ಮಾಡಿ ಅದನ್ನು ಬಿಟ್ಟು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳುವುದನ್ನು ನೋಡಿದರೆ ಒಕ್ಕೂಟ ಚುನಾಯಿತ ಪ್ರತಿನಿದಿಗಳ ಆಸ್ತಿಯೇ ಎಂದು ಪ್ರಶ್ನೆ ಮಾಡಿದರು.
ಒಕ್ಕೂಟದ ಉಳಿವಿಗಾಗಿ ನೊಂದ ಅಭ್ಯರ್ಥಿಗಳ ನ್ಯಾಯಕ್ಕಾಗಿ ಸೂಟ್‌ಕೇಸ್‌ನಲ್ಲಿ ಕಳೆದುಹೋಗಿರುವ ಸತ್ಯವನ್ನು ಹುಡುಕಿಕೊಟ್ಟು ಅಸತ್ಯದ ವಿರುದ್ದ ಕ್ರಮಕ್ಕಾಗಿ ಡಿ.೨೮ ರ ಗುರುವಾರ ಹಸುಗಳು ಹಾಗೂ ಸೂಟ್‌ಕೇಸ್‌ಗಳ ಸಮೇತ ಒಕ್ಕೂಟ ಮುತ್ತಿಗೆ ಹಾಕಿ ಲಕ್ಷಾಂತರ ರೈತರ ಜೀವನಾಡಿ ಹಾಗೂ ಅಭ್ಯರ್ಥಿಗಳ ಶ್ರಮಕ್ಕೆ ತಕ್ಕ ಉದ್ಯೋಗ ನೀಡುವಂತೆ ಸಹಕಾರ ಸಚಿವರನ್ನು ಒತ್ತಾಯ ಮಾಡುವ ನಿರ್ದಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಬಂಗಾರಿ ಮಂಜು, ತಾ.ಪ್ರ.ಕಾರ್ಯದರ್ಶಿ ರಾಜೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಸುನಿಲ್‌ಕುಮಾರ್, ಭಾಸ್ಕರ್, ಗುರುಮೂರ್ತಿ, ಶ್ರೀನಿವಾಸ್, ಜುಬೇರ್‌ಪಾಷ, ವಿಜಯ್‌ಪಾಲ್, ವಿಶ್ವ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ವೇಣು, ಕೇಶವ, ನವೀನ್, ಯಾರಂಘಟ್ಟ ಗಿರೀಶ್, ಸುಪ್ರಿಂ ಚಲ ಶೈಲಜ, ನಾಗರತ್ನ, ಚೌಡಮ್ಮ, ಇನ್ನು ಮುಂತಾದವರು ಇದ್ದರು