ಹಾಲು ಉತ್ಪಾದಕ ರೈತರಿಗೆ 3 ರೂ. ಹೆಚ್ಚಳ: ಬಸವರಾಜು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.31:- ಡೈರಿಗಳಿಗೆ ಗುಣಮಟ್ಟದ ಹಾಲು ಪೊರೈಕೆ ಮಾಡುವ ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ ಮೂರು ರೂ. ಏರಿಕೆ ಮಾಡಲು ಸರ್ಕಾರ ಹಾಗೂ ಕೆಎಂಎಫ್ ನಿರ್ಧಾರ ಮಾಡಿದೆ ಎಂದು ಚಾಮುಲ್ ನಿರ್ದೇಶಕ ಹಾಗೂ ವೆಂಕಟಯ್ಯನಛತ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್. ಬಸವರಾಜು ತಿಳಿಸಿದರು.
ತಾಲೂಕಿನ ವೆಂಕಟಯ್ಯನ ಛತ್ರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಾ.ನಗರ ಹಾಲು ಒಕ್ಕೂಟ ಸೇರಿದಂತೆ ರಾಜ್ಯ 16 ಹಾಲು ಒಕ್ಕೂಟಗಳು ಹಾಲಿನ ದರವನ್ನು ಏರಿಕೆ ಮಾಡುವಂತೆ ಕೆಎಂಎಫ್ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇದರ ಪರಿಣಾಮ ಮುಖ್ಯಮಂತ್ರಿಗಳು ಹಾಗೂ ಕೆಎಂಎಫ್ ಅಧ್ಯಕ್ಷರು ನಾವು ನೀಡಿದ್ದ 5 ರೂ. ಏರಿಕೆ ಪ್ರಸ್ತಾಪ ಕುರಿತು ಚರ್ಚೆ ಮಾಡಿ, ಪ್ರಸಕ್ತ ವರ್ಷದಲ್ಲಿ ಹಾಲು ಉತ್ಪಾಧಕರು ಹಾಗೂ ಗ್ರಾಹಕರಿಗೂ ಹೊರೆಯಾಗದಂತೆ 3 ರೂ. ಹೆಚ್ಚಳ ಮಾಡಿದೆ. ಈ ದರ ತಕ್ಷಣದಿಂದಲೇ ಜಾರಿಯಾಗಲಿದೆ ಎಂದರು.
ರೈತರು ಗುಣಮಟ್ಟದ ಹಾಲು ಪೊರೈಕೆ ಮಾಡುವ ಮೂಲಕ ಡೈರಿ ಹಾಗೂ ಒಕ್ಕೂಟದ ಅಭಿವೃದ್ದಿಗೆ ಶ್ರಮಿಸಬೇಕು. ಈಗಾಗಲೇ ನಮ್ಮ ಸಂಘ 12 ಕೋಟಿ ರೂ.ಗಳ ವಹಿವಾಟು ನಡೆಸಿ, 32 ಲಕ್ಷ ರೂ. ವ್ಯಾಪಾರ ವಹಿವಾಟು ಮಾಡಿದೆ. 10 ಲಕ್ಷ ರೂ.ಗಳ ನಿವ್ವಳ ಲಾಭ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ 5 ಲಕ್ಷ ರೂ.ಗಳ ಬೋನಸ್ ವಿತರಣೆ ಮಾಡಲಾಗುತ್ತದೆ. ಸಂಘದ ಸದಸ್ಯರು ಗುಣಮಟ್ಟದ ಹಾಲು ಪೊರೈಕೆ ಮಾಡುತ್ತಿರುವ ಪರಿಣಾಮ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಲಾಭಾಂಶ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸವಲತ್ತು ಕಲ್ಪಿಸಲಾಗುತ್ತದೆ ಎಂದರು.
ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಸಂಘದ ಅಭಿವೃದ್ದಿಯಲ್ಲಿ ಸದಸ್ಯರು ಹಾಗೂ ಆಡಳಿತ ಮಂಡಲಿಯ ಪಾತ್ರ ಬಹಳ ಇದೆ. ಅದೇ ರೀತಿ ನೌಕರರ ಶ್ರಮ ಸಾಕಷ್ಟಿದೆ. ವೆಂಕಟಯ್ಯನಛತ್ರ ಸಹಕಾರ ಸಂಘ ಬಹಳ ಹಳೇ ಸಂಘವಾಗಿದ್ದು, ಉತ್ತಮ ವಹಿವಾಟು ಮಾಡುವ ಮೂಲಕ ಮಾದರಿ ಸಂಘವಾಗಿದೆ. ಖಾಸಗಿ ಡೈರಿಗಳಿಗೆ ಹಾಲು ನೀಡದೇ ನಂದಿನಿ ಡೈರಿಗಳಿಗೆ ಹಾಲು ಪೊರೈಕೆ ಮಾಡಿ, ಸರ್ಕಾರ ಮತ್ತು ಒಕ್ಕೂಟದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪಶು ಆಹಾರವೇ ಸದಸ್ಯರಿಗೆ ಬಹುಮಾನ:
ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಬಹುಮಾನವಾಗಿ 50 ಸಾವಿರ ರೂ. ಮೌಲ್ಯದ ಪಶು ಆಹಾರವನ್ನು ನೀಡಿÀ ಸಂಘ ಮಾದರಿಯಾಗಿದೆ.
ಸಂಘದ 9 ಮಂದಿ ಸದಸ್ಯರು ಕಳೆದ ಸಾಲಿನಲ್ಲಿ ಹೆಚ್ಚು ಹಾಲು ಸರಬರಾಜು ಮಾಡಿದ್ದರು. ಇವರಲ್ಲಿ 7 ಲಕ್ಷ ರೂ. ಹಾಲು ನೀಡಿದ್ದ ಒಬ್ಬ ಸದಸ್ಯನಿಗೆ 7 ಮೂಟೆ ಪಶು ಆಹಾರ, 5 ಲಕ್ಷ ರೂ. ಹಾಲು ನೀಡಿದ್ದ ಇಬ್ಬರಿಗೆ ತಲಾ 5 ಮೂಟೆ ಪಶು ಆಹಾರ, ಮೂರು ಲಕ್ಷ ರೂ. ಹಾಲು ನೀಡಿದ್ದ ಮೂವರಿಗೆ ತಲಾ ಮೂರು ಮೂಟೆ ಪಶು ಆಹಾರ ಹಾಗೂ 2 ಲಕ್ಷ ರೂ. ಹಾಲು ನೀಡಿದ್ದ ಮೂವರಿಗೆ ತಲಾ ಮೂರು ಮೂಟೆ ಪಶು ಆಹಾರವನ್ನು ಬಹುಮಾನವಾಗಿ ನೀಡಿದೆ ಇತರೇ ಸದಸ್ಯರು ಸಹ ಡೈರಿಗೆ ಹೆಚ್ಚಿನ ಹಾಲು ಸರಬರಾಜು ಮಾಡುವ ಸಲುವಾಗಿ ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜು ತಿಳಿಸಿದರು.
ಡೈರಿ ಕಾರ್ಯನಿರ್ವಾಹಕ ಪುನೀತ್ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.
ಸಂಘದ ಉಪಾಧ್ಯಕ್ಷ ವಿ. ಪದ್ಮರಾಜ್, ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ. ಅಮರ್, ವಿಸ್ತಾರಣಾಧಿಕಾರಿ ಭಾಗ್ಯರಾಜ್, ನಿರ್ದೇಶಕರಾದ ಶಿವರಾಜು, ಸಂಪತ್ತುಕುಮಾರ್, ಮಹದೇವಸ್ವಾಮಿ ಎನ್, ಮಹದೇವಸ್ವಾಮಿ ಬಿ.ಎನ್. ನಾಗರಾಜು ವಿ.ಬಿ. ಕೃಷ್ಣೇಗೌಡ, ಬಂಗಾರು, ರೇಣುಕಾ, ಜಯಮ್ಮ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಡೈರಿ ಮಾಜಿ ಅಧ್ಯಕ್ಷರಾದ ಶಿವಮಲ್ಲಪ್ಪ, ಲಕ್ಷ್ಣಣಯ್ಯ, ಮಂಜುಳ ಅಂಕನಶೆಟ್ಟಿಪುರ, ವಿ.ಪಿ. ನಾಗರಾಜು, ಗ್ರಾಪಂ ಸದಸ್ಯರಾದ ಸೋಮಣ್ಣ, ಆಶೋಕ್, ಎಚ್.ಆರ್.ಸ್ವಾಮಿ, ಕೃಷ್ಣಮೂರ್ತಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಗಿರಿಮಲ್ಲು, ಮುಖಂಡರಾದ ಗೌಡಿಕೆ ನಂಜುಡಸ್ವಾಮಿ, ಬಸವಣ್ಣ, ಪುಟ್ಟಸ್ವಾಮಿ, ನಟೇಶ್, ನಾಗೇಂದ್ರಸ್ವಾಮಿ, ಛೇರ್ಮನ್ ಕುಮಾರ್, ಕೃಷ್ಣ, ಸಿಬ್ಬಂದಿಗಳಾದ ಮನು, ಮನೋಹರ, ಸುನಂದ ಹಾಗೂ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.