ಹಾಲು ಉತ್ಪಾದಕರ ಸಹಕಾರ ಸಂಘ ಮರು ವಿಚಾರಣೆಯಲ್ಲೂ ಭೀಮಾ ನಾಯ್ಕ ಸದಸ್ಯತ್ವ ರದ್ದು

ಬಳ್ಳಾರಿ, ಡಿ.24: ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ದಾಖಲೆಗಳು ನಕಲಿ ಎಂದು ಮರು ವಿಚಾರಣೆಯಲ್ಲೂ ಸಾಬೀತಾಗಿರುವುದರಿಂದ ಹಗರಿಬೊಮ್ಮನಹಳ್ಳಿ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ಅವರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವವನ್ನು ರದ್ದುಗೊಳಿಸಿ ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ನ್ಯಾಯಾಲಯದ ನ್ಯಾಯಾಧೀಶ ಲಿಯಾಕತ್ ಅಲಿ ಅವರು ನಿನ್ನೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಭೀಮಾ ನಾಯ್ಕ ಅವರ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಸ್ಥಾನ ಹಾಗೂ ರಾಯಚೂರು, ಬಳ್ಳಾರಿ, ಕೊಪ್ಪಳ (ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವೂ ಕೈತಪ್ಪಿದೆ.
ಭೀಮಾ ನಾಯ್ಕ ಅವರ ಆಯ್ಕೆ ಪ್ರಶ್ನಿಸಿ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಕೆ. ಬಸವರಾಜ, ಆರ್. ನಾಗನಗೌಡ ಅವರು ಆಗಸ್ಟ್ 17ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಭೀಮಾ ನಾಯ್ಕ ಅವರು 2013, 2018ರ ವಿಧಾನಸಭೆ ಚುನಾವಣೆ ವೇಳೆ ತಾವು ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಅವರ ಈ ಕ್ಷೇತ್ರ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಂಘದ ವ್ಯಾಪ್ತಿಯಲ್ಲಿ ಇರಲಿಲ್ಲ. ಅದಕ್ಕಾಗಿ ಅವರು ತಾನು ಅಡವಿ ಆನಂದದೇವನಹಳ್ಳಿ ನಿವಾಸಿ ಎಂದು ಸಾಬೀತುಪಡಿಸಲು ಜಮೀನು ಗುತ್ತಿಗೆ, ಮನೆ ಬಾಡಿಗೆಯ ಛಾಪಾ ಕಾಗದದ ಕರಾರು ಪತ್ರಗಳನ್ನು ಸಲ್ಲಿಸಿದ್ದರು. ಆದರೆ, ಅವುಗಳ ನೋಂದಣಿಯಾಗಿರಲಿಲ್ಲ. ತಹಶೀಲ್ದಾರ್ ಕೂಡ ಭೀಮಾ ನಾಯ್ಕ ಅವರು ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ದೃಢಪಡಿಸಿದ್ದರು. ಅವರ ಮತದಾರರ ಗುರುತಿನ ಚೀಟಿ ಮೇಲೆಯೂ ಇದೆ ವಿಳಾಸ ಇದೆ. ಈ ಎಲ್ಲಾ ಕಾರಣಗಳಿಂದ ಭೀಮಾ ನಾಯ್ಕ ಅವರು ಅಡವಿ ಆನಂದದೇವನಹಳ್ಳಿಯ ಕಾಯಂ ನಿವಾಸಿಯಲ್ಲ ಎನ್ನುವುದು ದೃಢಪಟ್ಟಿದೆ. ಅವರು ಸದಸ್ಯರಾಗಿ ಮುಂದುವರಿಯಲು ಅರ್ಹರಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸದಸ್ಯತ್ವ ರದ್ದಾಗುತ್ತದೆಂದು ಅಕ್ಟೋಬರ್ 6ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಭೀಮಾ ನಾಯ್ಕ ಅವರು ಧಾರವಾಡ ಹೈಕೋರ್ಟ್ ಪೀಠದ ಮೊರೆ ಹೋಗಿದ್ದರು. ನ್ಯಾಯಾಲಯವು ತಡೆಯಾಜ್ಞೆ ನೀಡಿ, ಮರು ವಿಚಾರಣೆ ನಡೆಸುವಂತೆ ತಿಳಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಮರು ವಿಚಾರಣೆ ನಡೆಸಿದ ಸಹಕಾರ ಸಂಘಗಳ ನ್ಯಾಯಾಲಯವು ಅವರ ಸದಸ್ಯತ್ವ ರದ್ದುಪಡಿಸಿ ನಿನ್ನೆ ಮರು ಆದೇಶ ಹೊರಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಭೀಮಾನಾಯ್ಕ ಅವರು ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದೆ ಎಂದು ಬಿಜೆಪಿ ಮುಖಂಡರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಈ ರೀತಿಯ ಕೆಲಸ ಮಾಡಿಸಿದ್ದಾರೆ. ಮಾಜಿ ಶಾಸಕ ನೇಮರಾಜ ನಾಯ್ಕ ಅವರಿಗೆ ನೇರವಾಗಿ ನನ್ನನ್ನು ಎದುರಿಸುವ ಶಕ್ತಿ ಇಲ್ಲ. ಹೀಗಾಗಿ ಹಿಂಬಾಗಿಲಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಿಶಕ್ತಿಯಿದ್ದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೆಂದು ಸವಾಲು ಹಾಕಿದ್ದಾರೆ.