ಹಾಲು ಉತ್ಪಾದಕರ ಸಂಘದ ಹಣ ದುರ್ಬಳಕೆ ಕ್ರಮಕ್ಕೆ ಆಗ್ರಹ

ಕೋಲಾರ,ಏ.೧೦: ಬೆಳಮಾರನಹಳ್ಳಿ ಹಾಲು ಉತ್ಪಾದಕರ ಹಣವನ್ನು ಅಕ್ರಮವಾಗಿ ಸಂಘದ ಕಾರ್ಯದರ್ಶಿ ಬಿ.ಎಲ್ ನಾರಾಯಣಮೂರ್ತಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಕಬಳಿಸಿದ್ದು, ಕೂಡಲೇ ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ವಹಿಸುವಂತೆ ಕೋಚಿಮೂಲ್ ಶಿಬಿರ ಕಚೇರಿಯ ಮುಖ್ಯ ಕಾರ್ಯನಿರ್ವಾಹಕ ಡಾ.ಮಹೇಶ್ ರವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ಎನ್ ರಾಮೇಗೌಡ ಮಾತನಾಡಿ, ಕೋಲಾರ ತಾಲೂಕು ವೇಮಗಲ್ ಹೋಬಳಿ ಬೆಳಮಾರನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಗಳಾದ ಬಿ.ಎಲ್ ನಾರಾಯಣಮೂರ್ತಿ ಹಾಗೂ ಆಡಳಿತ ಮಂಡಳಿ ೨೦೧೯ ರಿಂದ ೨೦೨೦ ರಲ್ಲಿ ರಚನೆ ಯಾಗಿದ್ದು, ೨೧ ತಿಂಗಳಿನಲ್ಲಿ ೧೨೮೨೨೫೮ ರೂಪಾಯಿಗಳನ್ನು ನರಸಾಪುರ ಹಾಲಿನ ಡೈರಿ ಕಾರ್ಯದರ್ಶಿ ಜನಾರ್ಧನ್, ದಿನ್ನೆಹೊಸಹಳ್ಳಿ ಹಾಲಿನ ಡೈರಿ ಕಾರ್ಯದರ್ಶಿ ನಾಗೇಶ್, ಕೊರಟಿ ಮಲ್ಲಂಡಹಳ್ಳಿ ಹಾಲಿನ ಡೈರಿ ಕಾರ್ಯದರ್ಶಿ ಶಾಮಣ್ಣ, ಎಂ.ಅಂಜನಪ್ಪ ನಿರ್ದೇಶಕರು ಬೆಳಮಾರನಹಳ್ಳಿ, ಈರಸ್ವಾಮಿ ಹಸುಗಳ ಸೆವೆನ್ ಕೊಡುವ ವ್ಯಕ್ತಿ ಬೆಳಮಾರನಹಳ್ಳಿ, ಕಾರ್ಯದರ್ಶಿ ಬಿ.ಎಲ್ ನಾರಾಯಣ ಮೂರ್ತಿ, ಕೆಇಬಿ ಜಿವಿಪಿ ಸಂಪತ್ ಕುಮಾರ್ ಇವರ ಅಕೌಂಟ್‌ಗಳಿಗೆ ಅಕ್ರಮವಾಗಿ ಹಾಲು ಉತ್ಪಾದಕರ ಹಣವನ್ನು ವರ್ಗಾಯಿಸಿ ಡ್ರಾ ಮಾಡಿ ಹಾಲು ಉತ್ಪಾದಕರಿಗೆ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು. ಪ್ರತಿ ವರ್ಷ ಸಂಗದ ಆಡಿಟ್ ನಡೆಯುತ್ತದೆ. ಈ ವಿಚಾರವು ಮೇಲ್ವಿಚಾರಕರಿಗೆ ತಿಳಿದಿರುತ್ತದೆ. ಆದರೆ ಮೇಲ್ವಿಚಾರಕರು ಸಹ ಅಕ್ರಮವೆಸಗಿರುವವರ ಜೊತೆ ಶಾಮೀಲಾಗಿ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.
ತಾಲೂಕು ಅಧ್ಯಕ್ಷ ದಿನ್ನೇಹೊಸಹಳ್ಳಿ ರಮೇಶ್ ಮಾತನಾಡಿ, ದಿನಾಂಕ ೬/೩/೨೦೨೧ ರಂದು ಮಾನ್ಯ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ ಶ್ರೀನಿವಾಸಗೌಡ ರವರ ಸಮ್ಮುಖದಲ್ಲಿ ಸಭೆ ನಡೆಸಿ ತನಿಖೆ ನೆಡೆಸಿದಾಗ ಅಕ್ರಮ ಬಯಲಿಗೆ ಬಂದಿರುತ್ತದೆ. ಆದುದರಿಂದ ಸಹಕಾರಿ ಸಂಘದ ಕಾರ್ಯದರ್ಶಿಗಳಾದ ಬಿ.ಎಲ್ ನಾರಾಯಣ ಮೂರ್ತಿ ತಮ್ಮ ತಪ್ಪನ್ನು ಒಪ್ಪಿಕೊಂಡು ದಿನಾಂಕ ೩೧ /೦೩/ ೨೦೨೧ರವರೆಗೆ ತನ್ನ ಎಲ್ಲಾ ಅಕ್ರಮ ಹಣವನ್ನು ಸಹಕಾರಿ ಸಂಘಕ್ಕೆ ಜಮಾ ಮಾಡುತ್ತೇನೆ ಎಂದು ಮುಚ್ಚಳಿಕೆ ಪತ್ರವನ್ನೂ ಅದೇ ದಿನದ ಡಿಎಂ ಹಾಗೂ ಮೇಲ್ವಿಚಾರಕ ಶ್ರೀನಿವಾಸ ಎದುರಿಗೆ ಬರೆದು ಕೊಟ್ಟಿರುತ್ತಾರೆ. ಹಾಗೂ ಅದೇ ದಿನ ಡಿ.ಎಂ ಹಾಗೂ ಮೇಲ್ವಿಚಾರಕ ಸಹ ಸಾರ್ವಜನಿಕರಿಗೆ ಕಾರ್ಯದರ್ಶಿಗಳು ಆದ ಬಿ.ಎಲ್ ನಾರಾಯಣಮೂರ್ತಿಯವರು ದಿನಾಂಕ ೩೧ /೦೩/ ೨೦೨೧ರವರೆಗೆ ಅಕ್ರಮ ಹಣವನ್ನು ಬ್ಯಾಂಕಿನ ಸಂಘದ ಖಾತೆಗೆ ಪಾವತಿಸುತ್ತೇನೆ ಎಂದು ತಿಳಿಸಿರುತ್ತಾರೆ.
ಆದರೂ ಇದುವರೆಗೂ ಆಡಳಿತ ಮಂಡಳಿ ಹಾಗೂ ಡಿಎಂ, ಸೂಪರ್‍ವೈಜರ್ ಇದರ ಬಗ್ಗೆ ಕ್ರಮ ತೆಗೆದುಕೊಳ್ಳದೆ ಇರುವುದು ತುಂಬಾ ಶೋಚನೀಯ ಸಂಗತಿಯಾಗಿದೆ. ಆದ ಕಾರಣ ಆಡಳಿತ ಮಂಡಳಿಯ ಮೇಲೆ ಊರಿನ ಹಾಲು ಉತ್ಪಾದಕರಿಗೆ ನಂಬಿಕೆ ಹೋಗಿರುತ್ತದೆ. ಆದಕಾರಣ ತಾವು ಸೂಪರ್‍ಸೀಡ್ ಕ್ರಮ ತೆಗೆದುಕೊಂಡು ಬೆಳಮಾರನಹಳ್ಳಿ ಡೈರಿಯನ್ನು ಉಳಿಸಿ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಜಿ ವೀರಭದ್ರಸ್ವಾಮಿ, ಜಿಲ್ಲಾ ಮುಖಂಡರಾದ ಹೆಚ್.ಆರ್ ಚಂದ್ರಪ್ಪ, ಕೃಷ್ಣಪ್ಪ, ಬೆಳಮಾರನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಬಿ.ಪಿ ಮುನಿರಾಜ್, ಜಂಗಮಗುರ್ಜೇನಹಳ್ಳಿ ಗ್ರಾಮ ಘಟಕದ ಉಪಾಧ್ಯಕ್ಷ ಬಸವಾರಾಧ್ಯ, ವಿಶ್ವನಾಥಪುರ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥಗೌಡ, ನರಸಿಂಹಮೂರ್ತಿ, ಬೆಳಮಾರನಹಳ್ಳಿ ಶ್ರೀನಿವಾಸ್, ಕಿರಣ್‌ಕುಮಾರ್, ರಂಜಿತ್‌ಕುಮಾರ್, ಬಿ.ಪಿ ಶ್ಯಾಮಣ್ಣ ಬಿ.ಆರ್ ಹರೀಶ್, ಬಿ.ಸಿ ಮಧು, ಬಿ.ಎಂ ಲೋಕೇಶ್, ಬಿ.ಎಂ.ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.