ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

ಬೆಂಗಳೂರು :ಯಲಹಂಕ ಕ್ಷೇತ್ರದ ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎಲ್ಲಾ ೧೩ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಗೆಲುವಿನ ಸಂಭ್ರಮಾಚರಣೆಯ ನಂತರ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ, ಗೆಲುವಿನ ರೂವಾರಿ ಸತೀಶ್ ಕಡತನಮಲೆ ಮಾತನಾಡಿ, ಕಳೆದ ೫ ವರ್ಷಗಳ ಅಧಿಕಾರದಲ್ಲಿದ್ದ ಆಡಳಿತ ಮಂಡಳಿಯ ಅವಧಿಯಲ್ಲಿ ಅವ್ಯವಹಾರದ ಅಹಿತಕರ ವಾತಾವರಣ ಇದ್ದ ಕಾರಣದಿಂದಾಗಿ ನ್ಯಾಯಾಲಯದ ಮೊರೆ ಹೋಗಿ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿ ನೇಮಿಸಲು ಕೋರಲಾಗಿತ್ತು. ನ್ಯಾಯಾಲಯ ಚುನಾವಣೆ ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಸಿದ್ದು, ಇದರಲ್ಲಿ ಬಿಜೆಪಿ ಬೆಂಬಲಿತ ಎಲ್ಲಾ ೧೩ ಅಭ್ಯರ್ಥಿಗಳು ಜಯ ದಾಖಲಿಸಿರುವುದು ಹೊಸದೊಂದು ಇತಿಹಾಸ ನಿರ್ಮಾಣಗೊಂಡಿದೆ ಎಂದರು.

ಬೆಂಗಳೂರು ಮಹಾನಗರ ಬೃಹದಾಕಾ ರವಾಗಿ ಬೆಳೆಯುತ್ತಿದ್ದು, ಕೃಷಿ ಮತ್ತು ಹೈನುಗಾರಿಕೆ ಒಂದು ಸವಾಲಾಗಿ ಪರಿಣಮಿಸಿದೆ. ಇಂತಹ ವಿಷಮ ಸ್ಥಿತಿಯಲ್ಲೂ ಹಾಲು ಉತ್ಪಾದನೆಯ ಕಾಯಕವನ್ನು ನಿಷ್ಠೆಯಿಂದ ಕೈಗೊಂಡಿರುವ ರೈತರ ಪರಿಶ್ರಮ ಪ್ರಶಂಸಾರ್ಹ. ಈ ದಿಸೆಯಲ್ಲಿ ಹಾಲು ಉತ್ಪಾದಕರ ಒಂದು ನಯಾ ಪೈಸೆಯೂ ಸಹ ಪೋಲಾಗದಂತೆ ಅತ್ಯುತ್ತಮ ಆಡಳಿತ ನಿರ್ವಹಣೆಯ ಮೂಲಕ ಸಹಕಾರ ಸಂಘವನ್ನು ಮುನ್ನಡೆಸುವ ಗುರುತರವಾದ ಜವಾಬ್ದಾರಿ ಹೊಸ ಆಡಳಿತ ಮಂಡಳಿಯ ಹೆಗಲ ಮೇಲಿದೆ. ಪಾರದರ್ಶಕ ರೀತಿಯಲ್ಲಿ ಆಡಳಿತ ನಡೆಸುವ ಮೂಲಕ ಸಹಕಾರ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗ ಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಅರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷರು, ಕಡತನಮಲೆ ಗ್ರಾಮದ ಮುಖಂಡರಾದ ಕೆ.ಆರ್.ತಿಮ್ಮೇಗೌಡ, ನೂತನ ಆಡಳಿತ ಮಂಡಳಿಗೆ ಅಯ್ಕೆಯಾಗಿರುವ ನಿರ್ದೇಶಕರಾದ ಅರಸೇಗೌಡ ಕೆ.ಸಿ., ಚನ್ನೇಗೌಡ, ಜಯಲಕ್ಷ್ಮಿ, ಕೆ.ಎಂ.ನಂಜೇಗೌಡ, ಪಾಂಡುರಂಗಯ್ಯ, ರಾಮಯ್ಯ ಎಂ.ರಾಮಚಂದ್ರಯ್ಯ, ನಾಗರತ್ನಮ್ಮ, ಸೌಭಾಗ್ಯ, ರಂಜಿತ, ಮುತ್ತರಾಯಪ್ಪ, ನಾಗರಾಜ್ ಆರ್, ಜಿನ್ನರಾಜು ಸೇರಿದಂತೆ ಕಡತನಮಲೆ ಗ್ರಾಮದ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರಿದ್ದರು.