ಹಾಲು ಅತ್ಯುತ್ತಮ ಉತ್ಕøಷ್ಠ ದ್ರವರೂಪದ ಪದಾರ್ಥ: ಡಾ.ಆರ್.ಬಿ.ಬೆಳ್ಳಿ

ವಿಜಯಪುರ, ಜೂ.2-ಹಾಲು ಅತ್ಯುತ್ತಮ ಹಾಗೂ ಉತ್ಕøಷ್ಠ ದ್ರವರೂಪದ ಪದಾರ್ಥವಾಗಿದ್ದು ಇದನ್ನು ವೃದ್ದರು, ವಯಸ್ಕರು ಹಾಗೂ ಚಿಕ್ಕಮಕ್ಕಳಾದಿಯಾಗಿ ಎಲ್ಲರೂ ಉಪಯೋಗಿಸಬಹುದಾಗಿದೆ ಎಂದು ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಹೇಳಿದರು.
ಇಂದು ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗಾಗಿ ಹಮ್ಮಿಕೊಂಡ ಶುದ್ಧ ಹಾಲಿನ ಉತ್ಪಾದನೆಗಾಗಿ ವೈಜ್ಞಾನಿಕ ಹೈನುಗಾರಿಕೆ ಆನ್‍ಲೈನ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಾಲಿನಲ್ಲಿ ಪಾಸ್ಪೋಲಿಪಿಡ್ ಹಾಗೂ ಪ್ರೋಟೀನ್ ಅಲ್ಲದೆ ವಿಟಮಿನ್ ಎ.ಡಿ.ಇ.ಕೆ ಅಂಶಗಳು ಇರುತ್ತವೆ. ಇವು ದೇಹದಲ್ಲಿರುವ ಸರ್ವ ಅಂಗಾಂಗಗಳಿಗೆ ವಿಶೇಷವಾಗಿ ಮೂಳೆ ಮತ್ತು ಹಲ್ಲನ್ನು ಗಟ್ಟಿಗೊಳಿಸುವದಲ್ಲದೇ ಥೈರಾಯ್ಡ್ ಗ್ರಂಥಿ, ಹೃದಯ, ಜಠರ ಮತ್ತು ಇತರ ಅಂಗಗಳಿಗೆ ವಿಶೇಷ ಶಕ್ತಿ ತುಂಬಿ ಚಟುವಟಿಕೆಯಿಂದರಲು ಸಹಾಯವಾಗುತ್ತದೆ ಎಂದು ಹೇಳುತ್ತಾ ಇಂದು ರೈತರು ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಯತ್ತ ಹೆಚ್ಚಿನ ಗಮನ ವಹಿಸಬೇಕೆಂದರು.
ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಲಬುರಗಿಯ ಪಶು ಸಂಗೋಪನಾ ಅಧಿಕಾರಿ ಡಾ. ಅಣ್ಣಾರಾವ್ ಪಾಟೀಲ್ ವಿಶೇಷ ಉಪನ್ಯಾಸ ನೀಡಿ, ರೈತರು ಉಪಕಸಬಾಗಿ ಹೈನುಗಾರಿಕೆ ಮಾಡಬೇಕು ಹಾಲು ಉತ್ಪಾದಿಸಲು ರಾಸುಗಳಿಗೆ ಉತ್ತಮ ಹಸಿಮೇವು, ಒಣಮೇವು, ದಾಣಿಮಿಶ್ರಣ ಒದಗಿಸಬೇಕು. ಕೊಟ್ಟಿಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು, ದನಕ್ಕೆ ಬರುವ ರೋಗಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ. ಶುಭಾ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಗೃಹ ವಿಜ್ಞಾನಿ ಡಾ. ಪ್ರೇಮಾ ಪಾಟೀಲ್ ಸ್ವಾಗತಿಸಿದರು. ವಿವೇಕ ದೇವರನಾವದಗಿ, ಶ್ರೀಶೈಲ ರಾಠೋಡ ಉಪಸ್ಥಿತರಿದ್ದರು.