ಹಾಲುಮತ ಸಮಾಜ ಹಾಲಿನಂತಹ ಪರಿಶುದ್ಧ ಮನಸ್ಸುಳ್ಳವರು, ಸಮಯ ಬಂದರೆ ಸಿಂಹದಂತೆಃ ಶಾಸಕ ಡಾ.ದೇವಾನಂದ ಚವ್ಹಾಣ

ವಿಜಯಪುರ, ಜು.26-ಹಾಲುಮತ ಸಮಾಜ ಹಾಲಿನಂತಹ ಪರಿಶುದ್ಧ ಮನಸ್ಸುಳ್ಳವರು, ಸಮಯ ಬಂದರೆ ಸಿಂಹದಂತೆ ಘರ್ಜಿಸುವ ತಾಕತ್ತು ಸಹ ಅವರಲ್ಲಿದೆ ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.
ನಗರದ ಸಿದ್ದೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಹಾಲುಮತ ನೌಕರರ ಸಮಾವೇಶ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪವಿತ್ರವಾದ ಹಾಲು ಮತ ಸಮಾಜ ಬಹುದೊಡ್ಡ ಸಂಖ್ಯೆಯಲ್ಲಿ ಇದೆ. ಹಾಲುಮತ ಸಮಾಜ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಕಂಬಳಿ ಬೀಸಿ ಮಳೆಯನ್ನು ಸುರಿಸಿದ ಇತಿಹಾಸ ಈ ಸಮಾಜ ಹೊಂದಿದೆ. ಇದು ಹಾಲುಮತ ಸಮಾಜದ ಅದಮ್ಯ ಹಾಗೂ ಪರಿಶುದ್ಧ ಭಕ್ತಿಯ ಸಂಕೇತದ ಉದಾರಹಣೆ ಎಂದರು. ವಿಜಯಪುರ ಜಿಲ್ಲೆಯಲ್ಲಿ ಹಾಲುಮತ ಸಮಾಜ ಅತೀ ಹೆಚ್ಚಿನ ಜನಸಂಖ್ಯೆ ಇದೆ. ಆದರೂ ರಾಜಕೀಯವಾಗಿ ಬಹಳಷ್ಟು ಹಿಂದುಳಿದಿದೆ. ಇಂಡಿ ಹಾಗೂ ಸಿಂದಗಿ ಎರಡೂ ತಾಲೂಕಿನಲ್ಲೂ ಹಾಲುಮತ ಸಮಾಜಕ್ಕೆ ಟಿಕೀಟ್ ಸಿಕ್ಕರೂ ಸಹಿತ ಸಮಾಜದ ಯಾವೋಬ್ಬ ನಾಯಕನನ್ನು ವಿಧಾನ ಸಭೆಗೆ ಕಳುಹಿಸಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಹಾಲುಮತ ಸಮಾಜ ಒಗ್ಗಟ್ಟು ಉಳಿಸಿಕೊಂಡು ಬರುವಲ್ಲಿ ವಿಫಲವಾಯಿತು ಎಂದರು.
ನನ್ನ ಅವಧಿಯಲ್ಲಿ ಸುಮಾರು 7 ಕೋಟಿ ರೂ. ಅನುದಾನವನ್ನು ಹಾಲುಮತ ಸಮಾಜದ ದೇವಾಲಯಗಳಿಗೆ ಒದಗಿಸಿಸುವ ಮೂಲಕ ಹಾಲುಮತದ ಋಣ ತೀರಿಸುವ ಚಿಕ್ಕ ಪ್ರಯತ್ನ ಮಾಡಿದ್ದೇನೆ. ಹಾಲುಮತ ಸಮಾಜದ ಸಾಂಸ್ಕøತಿಕ, ಸಾಮಾಜಿಕ ಚಟುವಟಿಕೆಗಳಿಗೆ ಯಾವುದೇ ಭವನ ನಿರ್ಮಾಣವಾಗಿಲ್ಲ. ಹಾಲುಮತ ಸಮಾಜಕ್ಕೆ ಒಂದು ಸಿಎ ಸೈಟ್ ಒದಗಿಸುವ ಕೆಲಸವನ್ನು ಪಾಲಿಕೆ ಆಯುಕ್ತರು ಮಾಡಬೇಕು. ಆ ನಿವೇಶನ ದೊರಕಿಸಿದರೆ ಹಾಲುಮತ ಸಮುದಾಯ ಭವನದ ಕಟ್ಟಡ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಭರವಸೆ ನೀಡಿದರು.
ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಬಸನಗೌಡ ಎಂ. ಪಾಟೀಲ ಮಾತನಾಡಿ, ಹಾಲುಮತ ಸಮಾಜ ಸಮಾಜೀಕವಾಗಿ, ಶೈಕ್ಷಣಿಕವಾಗಿ ಸದೃಡವಾದ ಸಮಾಜವಾಗಿದೆ. ಹಾಲುಮತದವರು ಎಂದಿಗೂ ಮಾತು ತಪ್ಪಲಾರರು. ಆರ್ಥಿಕವಾಗಿ ಬಲಿಷ್ಠವಾದರೆ, ರಾಜಕೀಯವಾಗಿ ಮುಂಚೂಣಿಯಲ್ಲಿ ಇರಲು ಎಲ್ಲ ಅರ್ಹರತೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಆ ಸಮಾಜಕ್ಕೆ ನಾವು ಸದಾ ಬೆಂಬಲ ನೀಡಲಿದ್ದೇವೆ ಎಂದು ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಕವಲುಗುಡ್ಡದ ಶ್ರೀ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ, ನಮ್ಮನ್ನು ಯಾರು ಬೆಳೆಸುವುದಿಲ್ಲ. ನಾವೇ ಬೆಳೆಯಬೇಕು ಸಮಾಜದ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದರು. ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಇಷ್ಟೊಂದು ದೊಡ್ಡ ಸಮಾಜವಿದೆ ಆದರೂ ಜಿಲ್ಲೆಯಲ್ಲಿ ಯಾವುದೇ ಹಾಲುಮತ ಸಮುದಾಯ ಭವನ ಇಲ್ಲ. ಇದು ನಮ್ಮ ಸಮಾಜದ ದುರ್ದೈವವೇ ಸರಿ ಎಂದು ನೋವು ತೊಡಿಕೊಂಡರು.
ಮಕಣಾಪುರದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ಜನ ಇದ್ದರೆ ಏನು ಫಲ. ನಮ್ಮವರನ್ನು ನಾವೇ ಹಿಡಿದು ಹಿಸಕುತ್ತಿದ್ದೇವೆ. ರಾಜಕೀಯವಾಗಿ ಬೆಳೆಯುವುದು ಯಾವಾಗ ಎಂದು ಪ್ರಶ್ನಿಸಿದರು. ಸಮಾಜ ಬಾಂಧವರಲ್ಲಿ ಹಾಲುಮತ ಸ್ವಾಮೀಜಿಗಳ ಬಗ್ಗೆ ಹಾಗೂ ಮಠಗಳ ಬಗ್ಗೆ ಭಯಾ-ಭಕ್ತಿ, ಗೌರವ ಬೆಳೆಸಿಕೊಳ್ಳಬೇಕು. ಹಾಲುಮತ ಸಮಾಜಕ್ಕೆ ದೊಡ್ಡ ಇತಿಹಾಸ ಇದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಸಮಾಜದ ಹಿರಿಯರು, ವಿದ್ಯಾವಂತರ ಮೇಲಿದೆ. ವೈಯಕ್ತಿ ಸ್ವಾರ್ಥ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಹಾಲುಮತ ಸಮಾಜ ಸದೃಡವಾಗುತ್ತದೆ ಎಂದರು. ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಅಭಿನವ ಪುಂಡಲಿಂಗೇಶ್ವರ ಮಹಾರಾಜರು, ಹಾಲುಮತ ನೌಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಬಗಲಿ, ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಸಹಕಾರ್ಯದರ್ಶಿ ರವಿ ಕಿತ್ತೂರ, ಜಿಲ್ಲಾ ಶಸ್ತ್ರಚಿಕಿತ್ಸಕರು ಡಾ.ಎಸ್.ಎಲ್.ಲಕ್ಕಣ್ಣವರ, ಜೆಸ್ಕಾಮಂ ಅಧೀಕ್ಷ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಸಂಘದ ಪದಾಧಿಕಾರಿಗಳಾದ ಶಿವಾನಂದ ಹಿರೇಕುರುಬರ, ಸುನೀಲ ತೊಂಟಾಪೂರ, ಮಲ್ಲು ವಾಲಿಕಾರ, ಮಲ್ಲಿಕಾರ್ಜುನ ಪೂಜಾರಿ, ರಾಜು ಕುರಿಯರವರ, ಕರೆಪ್ಪ ಬಸ್ತಾಳ, ಧರ್ಮಣ್ಣ ತೊಂಟಾಪೂರ, ರಾಜು ಕಗ್ಗೊಡ ಇನ್ನಿತರೆ ಸಮಾಜ ಮುಖಂಡರು ಉಪಸ್ಥಿತರಿದ್ದರು.