ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮಕ್ಕೆ ಸಿದ್ಧತೆ

ದೇವದುರ್ಗ.ಜ.೯- ಕಲಬುರಗಿ ವಿಭಾಗ ಮಟ್ಟದ ಶ್ರೀಕನಕ ಗುರುಪೀಠ ಹಾಗೂ ಹಾಲುಮತದ ಶಕ್ತಿ ಕೇಂದ್ರ ತಿಂಥಣಿ ಬ್ರಿಡ್ಜ್ ಹತ್ತಿರದ ಮಹಾಸಂಸ್ಥಾನದಲ್ಲಿ ಜ.೧೨, ೧೩ ಹಾಗೂ ೧೪ರಂದು ನಡೆಯುವ ಹಾಲುಮತ ಸಂಸ್ಕೃತಿ ವೈಭವ ೨೦೨೧ ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗಿದೆ.
ಶ್ರೀಮಠದ ಸಿದ್ಧರಾಮಾನಂದ ಮಹಾಸ್ವಾಮೀಜಿಗಳು ಸಿದ್ಧತೆ ಬಗ್ಗೆ ಶನಿವಾರ ಪರಿಶೀಲನೆ ನಡೆಸಿದರು. ಬುಡಕಟ್ಟು, ಹಾಲುಮತ ಸಾಂಸ್ಕೃತಿಕ, ಸಾಂಪ್ರದಾಯಿಕ, ಆಚಾರ-ವಿಚಾರ, ಸಂಸ್ಕೃತಿ ಮತ್ತು ಪರಂಪರೆ ಎಂಬ ಮೂರು ಬಗೆಯಲ್ಲಿ ಪ್ರತಿ ವರ್ಷದಂತೆ ನಡೆಯುವ ಈ ಒಂದು ಮಹತ್ವದ ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು, ಮಂತ್ರಿಗಳು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಹೆಳವರು, ಗೊರವರು, ಈರಕಾರರು, ಪೂಜಾರಿಗಳು ಸೇರಿ ವಿವಿಧ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವವರ ಸಮಾವೇಶ ನಡೆಯಲಿದೆ.
ಸಂಸ್ಕೃತಿ ಮತ್ತು ಪರಂಪರೆಯನ್ನು ಉಣಬಡಿಸುವ ಕಾಯಕದಲ್ಲಿ ನಿರತರಾಗುವ ಮೂಲಕ ಸಮಾಜದ ಘನತೆ ಹಾಗೂ ಸಂಘಟನೆ ಉನ್ನತಿ ಬಯಸೋಣ. ಈ ಒಂದು ಮಹತ್ವದ ಕಾರ್ಯಕ್ರಮದಲ್ಲಿ ಪ್ರತಿ ವರ್ಷವೂ ಪೂಜ್ಯ ಪೀಠಾಧಿಪತಿ ಶ್ರೀಸಿದ್ದರಾಮಾನಂದ ಮಹಾಸ್ವಾಮಿಗಳು ವಿಭಿನ್ನವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ವಿಶಿಷ್ಟ ರೀತಿಯಲ್ಲಿ ದೇಶದ ವಿವಿಧ ಭಾಗಗಳಿಂದ ಬುಡಕಟ್ಟು ಕುರುಬ ಜನಾಂಗದ ಕೆಳ ಹಂತದ ಮತ್ತು ಮೇಲ್ವರ್ಗದ ವಿವಿಧ ಆಯಾಮಗಳ ಜಾನಪದ ಸಾಹಿತ್ಯ ರಾಜಕೀಯ ಮತ್ತು ಸಂಘಟನೆಯ ವ್ಯಕ್ತಿಗಳನ್ನು ಆಮಂತ್ರಣ ನೀಡಿ ಉಡುಗೆ ತೊಡುಗೆ ಆಹಾರ ಪದ್ಧತಿ ಸಂಪ್ರದಾಯ ಮತ್ತು ಹಾಲುಮತ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳ ಪರಿಚಯಿಸುವ ಪ್ರಯತ್ನ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಶಿವ ಸಿದ್ದೇಶ್ವರ ಸ್ವಾಮಿ, ಮುಖಂಡರಾದ ಶಿವಣ್ಣ ವಕೀಲ, ಶರಣಪ್ಪ ರೂಡಿಗಿ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಶರಣಯ್ಯ ಒಡೆಯರ್ ಇದ್ದರು.