ಹಾಲುಮತ ಸಂಸ್ಕೃತಿ ವೈಭವಕ್ಕೆ ಸಿದ್ದರಾಮಯ್ಯ ಮೆರಗು

ದೇವದುರ್ಗ,ಜ.೧೨- ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.೧೨, ೧೩ ಹಾಗೂ ೧೪ರವರೆಗೆ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀಸಿದ್ದರಾಮಾನಂದ ಸ್ವಾಮೀಜಿ ಹೇಳಿದರು. ಶ್ರೀಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗ್ಗೆ ೮ಕ್ಕೆ ಬೀರದೇವರ ಪಲ್ಲಕ್ಕಿಗಳ ಗಂಗಾಪೂಜೆ, ಭರಮಲಿಂಗೇಶ್ವರ ದೇವಸ್ಥಾನ ಉದ್ಘಾಟನೆ, ಧ್ವಜಾರೋಹಣ, ಸಾಮೂಹಿಕ ಪಟ್ಟಕ್ಕೆ ಹಾಕುವುದು, ಮಧ್ಯಾಹ್ನ ಹಾಲುಮತ ಕಲಾ ಪ್ರಕಾರ ಮತ್ತು ಕಲಾವಿದರ ಸಮಾವೇಶ ಜರುಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಮಾಜಿ ಸಿಎಂ ಸಿದ್ದರಾಮಯ್ಯ, ಎಂಎಲ್‌ಸಿ ಎಚ್.ವಿಶ್ವನಾಥ, ಮಾಜಿ ಸಚಿವರಾದ ಸತೀಶ ಜಾರಕಿಹೊಳಿ, ಎಚ್. ರೇವಣ್ಣ ಸೇರಿ ಇತರರು ಭಾಗವಹಿಸಲಿದ್ದಾರೆ. ಅಂದು ರಾತ್ರಿ ಸಿದ್ಧಪುರುಷ ಗುಳ್ಳದ ಗಾದಿಲಿಂಗ ತಾತಾ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
೧೩ರಂದು ಬೆಳಗ್ಗೆ ಸುಮಂಗಲೆಯರಿಗೆ ಉಡಿ ತುಂಬಿದ ಬಳಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಕೆ.ಆರ್.ನಗರ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಗೋವಾ ಮಾಜಿ ಡಿಸಿಎಂ ಚಂದ್ರಕಾಂತ ಕವಳೇಕರ, ಕೇಂದ್ರ ಸಚಿವ ಭಗವಂತ ಕೂಬಾ, ಸಚಿವರಾದ ಎಂಟಿಬಿ ನಾಗರಾಜ, ಭೈರತಿ ಬಸವರಾಜ, ಆನಂದ ಸಿಂಗ್, ಶಾಸಕರಾದ ಶಿವನಗೌಡ ನಾಯಕ, ರಾಜೂಗೌಡ, ಬಂಡೆಪ್ಪ ಕಾಶೆಂಪುರ ಭಾಗವಹಿಸಲಿದ್ದು, ಸಂಜೆ ೩ಕ್ಕೆ ಟಗರು ಕಾಳಗ, ರಾತ್ರಿ ಸಿದ್ಧಕುಲ ಮಾತೆ ಇಟಗಿ ಭೀಮಾಂಬಿಕೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
೧೪ರಂದು ಪ್ರಶಸ್ತಿ ಪ್ರಧಾನ ಸಮಾರಂಭ, ಸಿದ್ಧರಾಮೇಶ್ವರ ಜಯಂತಿ ಆಚರಣೆ, ಹೊಸದುರ್ಗದ ಈಶ್ವರಾನಂದಪುರ ಸ್ವಾಮೀಜಿ, ಅಮೃತರಾವ್ ಚಿಮ್ಮಕೋಡೆ, ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಸಮ್ಮುಖದಲ್ಲಿ ಸಾಧಕರಿಗೆ ಹಾಲುಮತ ಭಾಸ್ಕರ, ಕನಕರತ್ನ, ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಅಮಾತೆಪ್ಪ ಕಂದಕೂರು, ದಯಾನಂದ, ಎಸ್ಪಿ ಬಿ.ನಿಖಿಲ್, ಪಂಡಿತ ರಾವ್ ಚಿದ್ರಿ ಸೇರಿ ಇತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಎತ್ತು ಗಳ ಭಾರ ಎಳೆಯುವ ಸ್ಪರ್ಧೆ ಮತ್ತು ಸಂಜೆ ಲಕ್ಷ ದೀಪೋತ್ಸವ ಜರುಗಲಿವೆ. ಮೂರು ದಿನಗಳ ಕಾಲ ಕಣ್ಣಿನ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕುರುಬ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷ ಮುದುಕಪ್ಪ ವಕೀಲ, ಬೀರಪ್ಪ ಪೂಜಾರಿ, ಬಸನಗೌಡ, ಶರಣಯ್ಯ ಒಡೆಯರ್ ಇದ್ದರು.