ಹಾಲುಮತ ಸಂಸ್ಕೃತಿ ಒಂದು ಜಾತಿಗೆ ಸೀಮಿತವಲ್ಲ

ದೇವದುರ್ಗ.ಜ.೧೩- ಹಾಲುಮತ ಸಂಸ್ಕೃತಿ ಒಂದು ಜಾತಿಗೆ ಸೀಮಿತವಲ್ಲ. ಬಹುಸಂಖ್ಯಾತ ಹಿಂದುಳಿದ ವರ್ಗದ ಜನರ ಆಚರಣೆಯಾಗಿದೆ. ನಮ್ಮ ನಾಡಿನ ಬಹುದೊಡ್ಡ ಕಲಾ ವೈಭವವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಹಾಲುಮತಕ್ಕೆ ತನ್ನದೆಯಾದ ಇತಿಹಾಸವಿದ್ದು ಬಹುಸಂಖ್ಯಾತರ ಸಂಸ್ಕೃತಿ ಒಳಗೊಂಡಿದೆ. ವೀರಗಾಸೆ, ಕಣಿಕುಣಿತ, ಡೊಳ್ಳು ಕುಣಿತ ಸೇರಿ ೧೭ಹಾಲುಮತ ಕುಣಿತದ ಕಲಾವೈಭವಗಳಿವೆ. ಕಾಯಕದಿಂದ ಆರಂಭವಾದ ಜಾತಿವ್ಯವಸ್ಥೆ, ಇಂದು ಶೋಷಣೆ ಮೂಲಕ ಜಾತಿಗಳ ಅಭಿವೃದ್ಧಿಯನ್ನು ತಡೆದಿದೆ. ಈ ಜಾತಿ ವ್ಯವಸ್ಥೆ ಅಳಿಯದಂತೆ ಧರ್ಮದ ಚೌಕಟ್ಟನ್ನು ಕಟ್ಟಲಾಗಿದೆ. ಹೀಗಾಗಿಯೇ ಜಾತಿಗಳು ತಳಮಟ್ಟದಲ್ಲಿ ಬೇರೂರಿವೆ. ಇದರಿಂದ ಅಸಮಾಧಾನ, ಶೋಷಣೆ, ತಾರತಮ್ಯ ಮುಂದುವರೆದಿದೆ ಎಂದು ವಿಷಾದಿಸಿದರು.
ಜಾತಿರಹಿತ ಸಮಾಜ ನಿರ್ಮಾಣವಾಗಬೇಕು ಎನ್ನುವುದು ಡಾ.ಅಂಬೇಡ್ಕರ್ ಕನಸಾಗಿತ್ತು. ಹೀಗಾಗಿ ಸಂವಿಧಾನದಲ್ಲಿ ಮೀಸಲಾತಿ ಒದಗಿಸಿದ್ದಾರೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಲೇಬೇಕು. ಜಾತಿ ಚಡತ್ವದಿಂದ ಹೊರಬಂದು ಶೈಕ್ಷಣಿಕವಾಗಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಬದಲಾವಣೆ ಆಗದಿದ್ದರೆ ತುಳಿತಕ್ಕೊಳಗಾದ ಜಾತಿಗಳು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಜಾತಿ ಸಂಕೋಲೆಯನ್ನ ಎಲ್ಲರೂ ಕಿತ್ತೊಗೆಯಬೇಕಾಗಿದೆ.
ಚತುವರ್ಣ ವ್ಯವಸ್ಥೆಯಿಂದಾಗಿ ದಲಿತರು ಹಿಂದುಳಿದವರು ಹಾಗೂ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಸವಣ್ಣ ಬಂದನಂತರ ಮಹಿಳೆಯರಿಗೆ ಆದ್ಯತೆ ಸಿಕ್ಕಿದ್ದರೆ, ಅಂಬೇಡ್ಕರ್ ನಂತರ ತುಳಿತಕ್ಕೊಳಗಾದವರಿಗೆ ಶಿಕ್ಷಣ ಹಾಗೂ ಅವಕಾಶ ಸಿಗುತ್ತಿವೆ. ನಮ್ಮ ನಡುವೆ ಇರುವ ವೈರುಧ್ಯತೆಯನ್ನು ತೊಡೆದು ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯವಿದ್ದು, ಬಹುಸಂಖ್ಯ ಹಿಂದುಳಿದವರು ಶಿಕ್ಷಣ ಪಡೆದರೆ ಸ್ವಾಭಿಮಾನಿಗಳಾಗುತ್ತಾರೆ. ಸ್ವಾಭಿಮಾನದಿಂದ ಸಂಘಟನೆ, ಸಂಘಟನೆಯಿಂದ ಹೋರಾಟ, ಹೋರಾಟದಿಂದ ಅಧಿಕಾರ ಸಿಗಲಿದೆ ಎಂದರು.
ಶ್ರೀಸಿದ್ದರಾಮಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕೆಆರ್ ನಗರದ ಶ್ರೀಶಿವಾನಂದ ಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ ಸ್ವಾಮೀಜಿ, ಶಿವಸಿದ್ದೇಶ್ವರ ಸ್ವಾಮೀಜಿ, ಲಿಂಗಬೀರ ದೇವರು, ಬೀರಪ್ಪ ಸ್ವಾಮೀಜಿ, ಎಂಎಲ್ಸಿ ಎಚ್.ವಿಶ್ವನಾಥ್, ಶಾಸಕರಾದ ಬಸನಗೌಡ ದದ್ದಲ್ ಬಸನಗೌಡ ತುರ್ವಿಹಾಳ, ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಹನುಮಂತಪ್ಪ ಆಲ್ಕೋಡ್, ಎ.ರಾಜಶೇಖರ್ ನಾಯಕ್ ಇತರರಿದ್ದರು.

ಬಾಕ್ಸ್======

ಜಾನಪದ ಅಕಾಡೆಮಿ ಸ್ಥಾಪಿಸಲಿ
ಹಾಲುಮತ ಕಲಾವಿಭಾಗದಲ್ಲಿ ಹಲವು ಕುಣಿತಗಳಿದ್ದು ಇವುಗಳನ್ನ ಬೆಳೆಸಲು ರಾಜ್ಯ ಸರ್ಕಾರ ಮುಂದಾಗಬೇಕಾಗಿದೆ. ಡೊಳ್ಳು ಕುಣಿತ ವೀರಗಾಸೆ ಕುಣಿತ ಸೇರಿ ವಿವಿಧ ೧೭ಪ್ರಕಾರಗಳನ್ನು ಒಗ್ಗೂಡಿಸಿ ಅಕಾಡೆಮಿ ಸ್ಥಾಪಿಸಬೇಕು ಎಂದು ಮಾಜಿ ಸಚಿವ ರೇವಣ್ಣ ಒತ್ತಾಯಿಸಿದರು. ಸಮಾಜದಲ್ಲಿ ಕಲಾವಿದರಿಗೆ ಗೌರವ ಸಿಗುವ ಕೆಲಸ ಸರ್ಕಾರ ಮಾಡಬೇಕಿದೆ. ವಿವಿಧ ಕಲಾವಿದರು ಹಾಲುಮತ ಸಂಸ್ಕೃತಿ ಸೇರಿ ವಿವಿಧ ಪ್ರಕಾರದ ಕುಣಿತದಲ್ಲಿ ಪರಿಣಿತಹೊಂದಿದ್ದು ಕಲಾವಿದರಿಗೆ ಮಾಸ್ಯಾಸನ ನೀಡುವಂತ ವ್ಯವಸ್ಥೆಯನ್ನ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.