ಹಾಲುಣಿಸುವ ತಾಯಿಯಂದಿರಿಗೆ ಸ್ತನ ಕ್ಯಾನ್ಸರ್ ದೂರ

ಕಲಬುರಗಿ:ಆ.3: ಮಗುವಿಗೆ ಹಾಲುಣಿಸುವುದರಿಂದ ಸೌಂದರ್ಯ ಹಾಳಾಗುತ್ತದೆಂಬ ಕಲ್ಪನೆ ತಪ್ಪು. ಹಾಲು ಕುಡಿಸುವುದರಿಂದ ತಾಯಿಯ ದೇಹದಲ್ಲಿ ಶೇಖರವಾದ ಅಧಿಕ ಕೊಬ್ಬು ಕರಗಿ ತಾಯಿಯ ರೂಪ ಮತ್ತು ಆರೋಗ್ಯ ಎರಡೂ ವೃದ್ಧಿಸುತ್ತದೆ. ಎದೆಹಾಲು ಕುಡಿಸುವುದರಿಂದ ತಾಯಿಗೆ ಮಾತೃತ್ವದ ತೃಪ್ತಿ ದೊರಕುತ್ತದೆ. ಗರ್ಭಿಣಿಯಾಗಿದ್ದಾಗ ಹಿಗ್ಗಿದ ಗರ್ಭಕೋಶ ಶೀಘ್ರವಾಗಿ ತನ್ನ ಸಹಜ ಸ್ಥಿತಿಗೆ ತಲುಪುತ್ತದೆ. ಹಾಲು ಕುಡಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವುದು ತುಂಬಾ ಅಪರೂಪವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.

ನಗರದ ಶೇಖರೋಜಾದಲ್ಲಿನ ‘ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ‘ವಿಶ್ವ ಸ್ತನ್ಯಪಾನ ಸಪ್ತಾಹ’ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಹೆರಿಗೆಯ ತರುವಾಯ ಎರಡು-ಮೂರು ದಿನ ನಸು ಹಳದಿ ವರ್ಣದ ಮಂದ ಹಾಲು ಬರುತ್ತದೆ. ಈ ಕೊಲೆಸ್ಟ್ರಮ್ ಹಾಲನ್ನು ಅನೇಕರು ಮಗುವಿಗೆ ಕುಡಿಸುವುದಿಲ್ಲ. ಇದು ಮಗುವಿಗೆ ಸೂಕ್ತವಲ್ಲವೆಂದು ತಪ್ಪಾಗಿ ಭಾವಿಸಿ ಮೊದಲ ದಿನಗಳಲ್ಲಿ ಬರುವ ಗಟ್ಟಿ ಹಾಲನ್ನು ಹಿಂಡಿ ಚೆಲ್ಲುವುದು ತಪ್ಪು. ಕೊಲೆಸ್ಟ್ರಮ್ ಹಾಲಿನಲ್ಲಿ ಅಧಿಕ ಪ್ರೋಟಿನ್, ‘ಎ’ ಜೀವಸತ್ವ ಮತ್ತು ಮಗುವಿಗೆ ರೋಗಾಣುಗಳ ವಿರುದ್ಧ ರಕ್ಷಣೆ ನೀಡುವ ವಸ್ತುಗಳಿವೆ. ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಸೂಕ್ತವಾದ ತಾಯಿ ಹಾಲು ಅಜೀರ್ಣ, ಮಲಬದ್ಧತೆ ತೊಂದರೆ ತಡೆಯುತ್ತದೆ. ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಎದೆ ಹಾಲಿನಲ್ಲಿ ಸಾಕಷ್ಟು ಲವಣ ಮತ್ತು ನೀರು ಇರುವುದರಿಂದ ಕೊರತೆಯಾಗುವುದಿಲ್ಲ. ಮೂಳೆ ಮತ್ತು ಹಲ್ಲು ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ತಾಯಿ ಹಾಲಿನಲ್ಲಿದೆ. ಮಗು ಎದೆ ಹಾಲನ್ನು ಚೀಪಿ ಕುಡಿಯುವುದರಿಂದ ಮುಖದ ಮಾಂಸಖಂಡಗಳಿಗೆ ವ್ಯಾಯಾಮ ದೊರೆತು ಮಗುವಿನ ಮುಖ ಸುಂದರವಾಗಿ ರೂಪಗೊಳ್ಳುತ್ತದೆಯೆಂದು ಎಂದರು.

    ಮಗುವಿಗೆ ಪ್ರಕೃತಿಯ ಕೊಡುಗೆಯಾದ ತಾಯಿಯ ಎದೆ ಹಾಲಿಗೆ ಸಮನಾದ ಆಹಾರ ಜಗತ್ತಿನಲ್ಲಿಲ್ಲ. ಮಗುವಿಗೆ ದೊರೆಯುವ ಆಹಾರದಲ್ಲಿ ತಾಯಿ ಹಾಲಿಗೆ ಪ್ರಥಮ ಮತ್ತು ಉನ್ನತ ಸ್ಥಾನ. ಆಧುನಿಕವಾಗಿ ತಾಯಂದಿರು ತಮ್ಮ ಸೌಂದರ್ಯ  ಹಾಳಾಗುತ್ತದೆಯೆಂದು ಮಗುವಿಗೆ ಹಾಲುಣಿಸುವುದು ಕಡಿಮೆ ಮಾಡಿರುವುದು ಒಳ್ಳೆಯದಲ್ಲ. ಒಂದೂವರೆ ವರ್ಷದವರೆಗೆ ಹಾಲುಣಿಸಬೇಕು. ಆರು ತಿಂಗಳುಗಳ ಕಾಲ ಎದೆಹಾಲು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಆಹಾರವನ್ನು ನೀಡಬಾರದು. ತಾಯಿಯ ಹಾಲು ಮಗುವಿಗೆ ಅಮೃತಕ್ಕೆ ಸಮಾನವಾಗಿದೆ ಎಂದು ನುಡಿದರು.
   ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗೇಶ್ವರಿ ಮುಗಳಿವಾಡಿ, ಮಂಗಲಾ ಚಂದಾಪುರೆ, ಚಂದಮ್ಮಾ ಮರಾಠಿ, ಲಕ್ಷ್ಮೀ ಮೈಲಾರಿ, ಗಂಗಾಜ್ಯೋತಿ ಗಂಜಿ, ನಾಗೇಶ್ವರಿ ಮುಗಳಿವಾಡಿ, ಜಗನ್ನಾಥ ಗುತ್ತೇದಾರ, ರೇಷ್ಮಾ ನಕ್ಕುಂದಿ, ಗುರುರಾಜ ಕೈನೂರ್, ಚಂದ್ರಕಲಾ ಮಠಪತಿ, ಅರ್ಚನಾ ಸಿಂಗೆ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.