ಹಾಲಿ ಶಾಸಕರಿಗೆ ಟಿಕೆಟ್: ಬಿಎಸ್‌ವೈ

ಬೆಂಗಳೂರು,ಮಾ.೭-ಬಿಜೆಪಿಯಲ್ಲಿ ನಾಲ್ಕೈದು ಶಾಸಕರನ್ನು ಬಿಟ್ಟರೆ ಉಳಿದ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್ ಸಿಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕಲಬುರಗಿಯ ಇಲ್ಲಿನ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಬರೋರು ಬರಲಿ, ಹೋಗೋರು ಹೋಗಲಿ, ಬರೋರಿಗೆ ಸ್ವಾಗತ, ಬಿಟ್ಟು ಹೋಗುವವರು ಹೋಗಲಿ ಸಂತೋಷ ಎಂದ ಅವರು, ಬಿಜೆಪಿಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್‌ನಿಂದ ಹಲವರು ಸೇರ್ಪಡೆಯಾಗುತ್ತಾರೆ ಎಂದರು.
ಸಚಿವರಾದ ವಿ.ಸೋಮಣ್ಣ ಹಾಗೂ ನಾರಾಯಣಗೌಡ ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಅವರಷ್ಟೇ ಅಲ್ಲ ಯಾರೊಬ್ಬರೂ ಪಕ್ಷ ಬಿಡುವುದಿಲ್ಲ. ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಯಾರಾದರೂ ಬರುವುದಾದರೆ ಮುಕ್ತ ಸ್ವಾಗತವಿದೆ ಎಂದು ಆಹ್ವಾನ ನೀಡಿದರು.
ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದೆ. ನಾಲ್ಕೈದು ಜನಕ್ಕೆ ಟಿಕೆಟ್ ಸಿಗದಿರಬಹುದಷ್ಟೇ, ಇನ್ನು ಬಹುತೇಕ ಹಾಲಿ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿದೆ ಎಂದರು.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ೧೪೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಕಾಂಗ್ರೆಸ್ ಪಕ್ಷದ ಪ್ರಜಾ ದನಿ ಯಾತ್ರೆಯಲ್ಲಿ ಜನರು ಸೇರುತ್ತಿಲ್ಲ. ಮತ್ತೊಂದೆಡೆ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾಕಷ್ಟು ಜನರು ಸೇರುತ್ತಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ ಎಂಬುದನ್ನು ಸಾಬೀತುಪಡಿಸುವಂತಿದೆ ಎಂದರು.ಇತ್ತೀಚೆಗೆ ನಡೆದ ತ್ರಿಪುರಾ, ಮೇಘಾಲಯ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಏನು ಎಂಬುದು ಸಾಬೀತಾಗಿದೆ. ಇದರ ಜೊತೆಗೆ ಕಾಂಗ್ರೆಸ್ ಅಡ್ರೆಸ್ ಕಳೆದುಕೊಂಡಿರುವುದು ಮತ್ತೊಮ್ಮೆ ದೃಢಪಟ್ಟಿದೆ ಎಂದರು.
ಬೊಮ್ಮಾಯಿ ನೇತೃತ್ವ
ರಾಜ್ಯದಲ್ಲಿ ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಮುಗಿದ ಬಳಿಕ ನಡೆಯುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ನಿರ್ಧಾರವಾಗಲಿದೆ ಎಂದರು.
ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ, ಈ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು.
ರಾಹುಲ್ ಹೇಳಿಕೆಗೆ ಖಂಡನೆ
ವಿದೇಶಿ ನೆಲದಲ್ಲಿ ಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವರ್ತನೆ ಸರಿಯಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಟೀಕಿಸಿದರು.
ಒಂದು ರಾಷ್ಟ್ರೀಯ ಪಕ್ಷದ ಪ್ರಮುಖ ನಾಯಕರಾಗಿ ಹೀಗೆ ದೇಶ ವಿರೋಧಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂಥದ್ದಲ್ಲ. ಕೂಡಲೆ ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕರದ್ದು ತಿರುಕನ ಕನಸು
ರಾಜ್ಯದ ಮುಂದಿನ ಮುಖ್ಯಮಂತ್ರಿ ತಾವೇ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಲೇವಡಿ ಮಾಡಿದರು.ಇನ್ನು, ಬಿಜೆಪಿ ಉಮೇದುವಾರರ ಮೊದಲ ಪಟ್ಟಿ ಆದಷ್ಟು ಬೇಗ ಪ್ರಕಟಗೊಳ್ಳಲಿದೆ. ತಮ್ಮ ಪುತ್ರ ವಿಜಯೇಂದ್ರ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಬಹುಶಃ ಶಿಕಾರಿಪುರ ಕ್ಷೇತ್ರದಿಂದ
ಸ್ಪರ್ಧಿಸಬಹುದು ಎಂದು ಸೂಚ್ಯವಾಗಿ ಸುಳಿವು ನೀಡಿದರು.