
ಗೌರಿಬಿದನೂರು.ಆ೧೮:ನಗರದ ಹೊರವಲಯದಲ್ಲಿರುವ ಕೋಚಿಮುಲ್ ನ ಉಪಘಟಕದ ಮುಂಭಾಗ ಗುರುವಾರ ಹಾಲು ಉತ್ಪಾದಕರ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆ ಮತ್ತು ರಸ್ತೆತಡೆಯಲ್ಲಿ ರೈತಪರ ಸಂಘಟನೆಯ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಮಹಿಳಾ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಅನೇಕ ಮಂದಿ ಹೈನುದಾರರು ಹಾಲಿನ ದರ ಕಡಿಮೆ ಮಾಡಿರುವುದನ್ನು ವಿರೋಧಿಸಿ ರಸ್ತೆ ತಡೆ ಮಾಡಿ, ಒಕ್ಕೂಟದ ಉಪಘಟಕಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಪ್ರತಿಭಟನಾ ನಿರತ ಹೋರಾಟಗಾರರು ಮಿನಿ ವಿಧಾನಸೌಧದಿಂದ ಕಾಲ್ನಡಿಗೆಯಲ್ಲಿ ಜನ ಮತ್ತು ಜಾನುವಾರುಗಳೊಂದಿಗೆ ಕೋಚಿಮುಲ್ ಉಪಘಟಕದವರೆಗೆ ಸಾಗಿ ರಸ್ತೆ ತಡೆ ಮಾಡಿದ್ದಾರೆ.
ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಿ.ಎನ್.ವೆಂಕಟರೆಡ್ಡಿ ಮಾತನಾಡಿ, ಸರ್ಕಾರವು ಹಾಲಿನ ದರದಲ್ಲಿ ಹೆಚ್ಚಳ ಮಾಡಿದ್ದರೂ ಕೂಡ ಒಕ್ಕೂಟವು ಅದನ್ನು ಕಡಿಮೆ ಮಾಡುವ ಮೂಲಕ ರೈತರ ಶ್ರೇಯೋಭಿವೃದ್ದಿಗಿಂತ ಒಕ್ಕೂಟದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿರುವುದು ಸರಿಯಲ್ಲ. ನೊಂದ ಹೈನುದಾರರ ಹಿತ ಕಾಪಾಡಬೇಕಾದ ನಿರ್ದೇಶಕರು ಮತ್ತು ಅಧಿಕಾರಿಗಳು ರೈತರ ಹಾಲಿನ ಲಾಭದ ಹಣದಲ್ಲಿ ಅಧಿಕಾರ ನಡೆಸುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ. ಕೂಡಲೇ ಕಡಿತಗೊಳಿಸಿರುವ ಹಾಲಿನ ದರವನ್ನು ರೈತರಿಗೆ ಮರುಪಾವತಿ ಮಾಡಿ ರೈತರ ಬೆನ್ನೆಲುಬಾಗಿರುವ ಹೈನುಗಾರಿಕೆಯನ್ನು ಉಳಿಸುವ ಪ್ರಯತ್ನ ಮಾಡುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಹೋರಾಟಗಾರರಾದ ಸಿದ್ದಗಂಗಪ್ಪ ಮಾತನಾಡಿ,ಹಾಲಿನ ಹೆಚ್ಚು ಹೆಚ್ಚು ಉತ್ಪನ್ನಗಳನ್ನು ತಯಾರಿಸುವ ಘಟಕಗಳು ನಿರ್ಮಾಣವಾಗಬೇಕು. ನಮ್ಮೆಲ್ಲರ ಬೇಡಿಕೆಗಳನ್ನು ಈಡೇರಿಸುವವರಿಗೂ ಹೋರಾಟ ನಿಲ್ಲುವುದಿಲ್ಲ. ಘಟಕದ ಮುಂದೆಯೇ ಅನಿರ್ಧಿಷ್ಟ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ವೇಳೆ ಹೋರಾಟಗಾರರಾದ ಜಿ.ಎಲ್.ಅಶ್ವತ್ಥನಾರಾಯಣ, ಪ್ರಭಾಕರ್, ಮಾಳಪ್ಪ, ಮಂಜುನಾಥರೆಡ್ಡಿ ಸೇರಿದಂತೆ ಇತರರು ಮಾತನಾಡಿದರು.
ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಎಂ.ಆರ್.ಲಕ್ಷ್ಮಿನಾರಾಯಣ್, ಎಂ.ಎಸ್.ರಾಜಶೇಖರ್, ರವಿ, ಆರ್.ಎನ್.ರಾಜು, ತಾರಾನಾಥ್, ಲಕ್ಷ್ಮೀ, ರತ್ನರಾಜು, ಪ್ರಭು, ದೇವು, ಪ್ರಕಾಶ್, ಲಕ್ಷ್ಮಿದೇವಮ್ಮ, ಆಗ್ನೇಶ್, ಮಹಾದೇವ್, ಅರುಣ್, ಚರಣ್ ಸೇರಿದಂತೆ ಇತರರು ಭಾಗವಹಿಸಿದ್ದರು.