ಹಾಲಿನ ದರ ಕಡಿತ ಖಂಡನೀಯ

ಕಲಬುರಗಿ:ಜು.6: ರೈತರು ಮಳೆ-ಬೆಳೆ ಇಲ್ಲದೆ ತೀವ್ರ ಸಂಕಷ್ಟಕ್ಕೀಡಾದ ಪರಿಸ್ಥಿತಿಯಲ್ಲಿ ಗ್ಯಾರಂಟಿ ನಾಟಕವಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬೊಮುಲ್ ನಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಗೆ ಏಕಾಏಕಿ 2.85 ಪೈಸೆ ಕಡಿತಗೊಳಿಸಿ ರೈತರ ನಾಶ ಮಾಡಲು ಮುಂದಾಗಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆರೋಪಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಬೊಮುಲ್ ಸಂಸ್ಥೆ ರೈತರ ಉತ್ಪಾದನೆಯ ದರ ಕಡಿತಗೊಳಿಸಿ ಅಪಾರ ಆರ್ಥಿಕ ನಷ್ಟ ಉಂಟು ಮಾಡುತ್ತಿರುವುದರಿಂದ ರೈತರು ಮತ್ತಷ್ಟು ಕಂಗಾಲಾಗುವಂತಾಗಿದೆ ಎಂದು ಅವರು ಹೇಳಿದರು. ದಿನೇ ದಿನೇ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.ಇದರ ಜೊತೆಯಲ್ಲಿ ರೈತರ ಜೀವನಾಡಿಯಾಗಿರುವ ರೇಷ್ಮೆ ಗೂಡಿನ ಬೆಲೆ ಪಾತಾಳವನ್ನು ಕಂಡಿದೆ.ಬೆಳೆ ಬೆಳೆದರೂ ರೈತರಿಗೆ ಲಾಭ ಸಿಗುತ್ತಿಲ್ಲ.ಜೊತೆಗೆ ಮಳೆಯೇ ಬಾರದೆ ಇನ್ನೂ ಯಾವುದೇ ಭಿತ್ತನೆ ಮಾಡಲಾಗಿಲ್ಲ.ರೈತರಿಗೆ ಹೈನುಗಾರಿಕೆ ಕ್ಷೇತ್ರ ಆರ್ಥಿಕ ಪ್ರಗತಿ ಸಾಧಿಸುವ ಸಮಯದಲ್ಲಿ ಬರೆ ಎಳೆದಂತೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.