ಹಾಲಿನ ಡೈರಿಯಲ್ಲಿ ಸರ್ಕಾರಿ ಆಸ್ಪತ್ರೆ: ಕಟ್ಟಡಕ್ಕೆ ಅನುದಾನ ಬಂದರೂ ಜಾಗ ನೀಡದ ಸ್ಥಳೀಯಾಡಳಿತ

ಬೀದರ:​ಡಿ.27: ಗ್ರಾಮೀಣ ಜನರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗಬೇಕೆನ್ನು ಉದ್ದೇಶದಿಂದ ಸರ್ಕಾರ ಗ್ರಾಮದಲ್ಲಿ ಆಸ್ಪತ್ರೆಯೆನೋ ತೆರೆದಿದೆ. ವೈದ್ಯ ಸೇರಿದಂತೆ ನಾಲ್ಕು ಜನ ಸಿಬ್ಬಂದಿಯನ್ನು ನೇಮಿಸಿ, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳವನ್ನು ಕೊಡುತ್ತಿದೆ. ಆದರೆ, ಆಸ್ಪತ್ರೆಗೆ ಬೇಕಾದ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಹೀಗಾಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಪಡಸಾಲೆಯಲ್ಲಿ ಆಸ್ಪತ್ರೆ ನಡೆಸುವಂತಹ ದುಸ್ಥಿತಿ ಬಂದೊದಗಿದೆ. ಇದಕ್ಕೆ ಕಾರಣ ದೇವರು ಕೊಟ್ಟರು ಪೂಜಾರಿ ಕೊಡನು ಎಂಬಂತೆ ಆಗಿದೆ.ಸರ್ಕಾರ ಏನು ಆಸ್ಪತ್ರೆಗೆ 30 ಲಕ್ಷ ಹಣ ಮಂಜೂರು ಮಾಡಿದೆ. ಆದರೆ, ಇದಕ್ಕೆ ಜಾಗ ಮಾತ್ರ ಪಂಚಾಯತ್ ನವರು ನೀಡಿಲ್ಲ. ಈ ಹಿನ್ನಲೆ ವಿಧಿ ಇಲ್ಲದೇ ಹಾಲಿನ ಡೈರಿ ಕಟ್ಟಡದಲ್ಲಿಯೇ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ.
ರೋಗಿಗಳು ಕೂಡ ವಿಧಿ ಇಲ್ಲದೇ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯ ಶಿರ್ಸಿ ಔರಾದ್ ಗ್ರಾಮದಲ್ಲಿ ಕಳೆದ ಐದು ವರ್ಷದ ಹಿಂದೆ ಉಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ತೆರೆಯಲಾಗಿದ್ದು, ಓರ್ವ ವೈದ್ಯ, ನರ್ಸ್ ಸೇರಿದಂತೆ ಒಟ್ಟು ನಾಲ್ಕು ಜನ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಕಳೆದ ಐದು ವರ್ಷದಿಂದ ಹಾಲು ಉತ್ಪಾದಕರ ಸಹಕಾರಿ ಸಂಘದ ಒಂದು ಚಿಕ್ಕ ಹಾಲ್ ನಲ್ಲಿ ಸರಕಾರದ ಉಪ ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯುತ್ತಿದ್ದು, ರೋಗಿಗಳಿಗೆ ಹಾಗೂ ವೈದ್ಯರಿಗೂ ಕೂಡಾ ಇಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇನ್ನು ಮುಂಜಾನೆ ಹಾಗೂ ಸಾಯಂಕಾಲದ ಹೊತ್ತಿನಲ್ಲಿ ರೈತರು ಹಾಲು ತೆಗೆದುಕೊಂಡು ಬರುವುದರಿಂದ ಇಲ್ಲಿಗೆ ಬಂದಿರುವ ರೋಗಿಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗುವುದಿಲ್ಲ. ರೈತರು ಡೈರಿಗೆ ಹಾಲು ಹಾಕಿಹೋದ ನಂತರವೇ ರೋಗಿಗಳಿಗೆ ಚಿಕಿತ್ಸೆ ಕೊಡಬೇಕಾದ ಸ್ಥಿತಿ ಇಲ್ಲಿನ ವೈದ್ಯರಿಗಿದೆ.

ಶಿರ್ಸಿ ಔರಾದ್ ಗ್ರಾಮದಲ್ಲಿ 6 ಸಾವಿರ ಜನಸಂಖ್ಯೆಯಿದೆ. ಇಂತಹ ದೊಡ್ಡ ಗ್ರಾಮದಲ್ಲಿ 2015ರಲ್ಲಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ಸ್ಥಾಪಿಸಲಾಗಿದೆ. ಆದರೆ ಆರಂಭದಿಂದಲೂ ಇಲ್ಲಿ ವಿಘ್ನವಾಗುತ್ತಲೆ ಇದೆ. ಈ ಆರೋಗ್ಯ ಕೇಂದ್ರಕ್ಕೆ ಶಿರ್ಸಿ ಔರಾದ್ ಗ್ರಾಮಸ್ಥರಷ್ಟೇ ಅಲ್ಲದೆ, ಭೈರನಹಳ್ಳಿ ಗ್ರಾಮ ಹಾಗೂ ಔರಾದ್ ತಾಂಡಾ ಸೇರಿದಂತೆ ಒಟ್ಟು ಮೂರು ಗ್ರಾಮಗಳ ಜನ ಚಿಕಿತ್ಸೆಗೆ ಬರುತ್ತಾರೆ. ಚಿಕಿತ್ಸೆಗಾಗಿ ಪ್ರತಿ ನಿತ್ಯ ಹತ್ತಾರು ಜನ ಇಲ್ಲಿಗೆ ಆಗಮಿಸಿದಾಗ ಇದು ಆಸ್ಪತ್ರೆಯೋ? ಹಾಲಿನ ಡೈರಿಯೋ ಎಂಬ ಗೊಂದಲಕ್ಕೆ ಬೀಳುವಂತಾಗಿದೆ.

ಆರೋಗ್ಯ ಇಲಾಖೆಯಿಂದ ಇಲ್ಲಿನ ಆರೋಗ್ಯ ಕೇಂದ್ರಕ್ಕೆ 30 ಲಕ್ಷ ಮಂಜೂರಾಗಿದೆ. ಆದರೆ ಪಂಚಾಯತ್ ನವರು ನೂತನ ಕಟ್ಟಡ ಕಟ್ಟಡಕ್ಕೆ ನಿವೇಶನ ನೀಡದ ಹಿನ್ನಲೆ ಕಳೆದ ಐದು ವರ್ಷದಿಂದ ಕಟ್ಟಡ ನಿರ್ಮಾಣ ವಾಗುತ್ತಿಲ್ಲ. ಹೀಗಾಗಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಬೇಕಾದರೆ ಬೀದರ್​ಗೆ ಹೋಗಿ ಹೆರಿಗೆ ಮಾಡಿಸುವಂತಹ ಅನಿವಾರ್ಯತೆ ಎದುರಾಗಿದೆ‌. ಇನ್ನು ಶಿರ್ಸಿ ಔರಾದ್ ಗ್ರಾಮ ಜಿಲ್ಲಾ ಪಂಚಾಯತ್ ಮತಕ್ಷೇತ್ರ. ಬೀದರ್ ದಕ್ಷಿಣ ವಿಧಾನಸಭಾ ಮತಕ್ಷೇತ್ರಕ್ಕೆ ಬರುವ ಈ ಊರು ಜಿಲ್ಲಾ ಕೇಂದ್ರದಿಂದ ಅಣತಿ ದೂರದಲ್ಲಿದೆ. ಆದರೂ ಒಂದು ಆಸ್ಪತ್ರೆಯ ನಿರ್ಮಾಣಕ್ಕೆ ಒಂದು ಜಾಗವನ್ನ ನೀಡಲು ಪಂಚಾಯತ್ ಅಧಿಕಾರಿಗಳು, ತಹಶಿಲ್ದಾರ್, ಸ್ಥಳಿಯ ಶಾಸಕರಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಗ್ರಾಮಸ್ಥರದ್ದು. ಸಂಬಂಧಿಸಿದವರು ಈಗಲಾದರೂ ಶಿರ್ಸಿ ಔರಾದ್ ಗ್ರಾಮಸ್ಥರ ಸಮಸ್ಯೆ ಆಲಿಸಬೇಕಿದೆ.