ಹಾಲಿನ ಉತ್ಪಾದಕತೆ, ಗುಣವತ್ತತೆಗೆ ಒತ್ತು ನೀಡಲು ಸೂಚನೆ


ಧಾರವಾಡ ಜೂ.2:75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ “ವಿಶ್ವ ಹಾಲು ದಿನಾಚರಣೆ” ಅಂಗವಾಗಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕೃಷಿ ಇಲಾಖೆ, ಧಾರವಾಡ ಹಾಗೂ ಜಿಲ್ಲಾ ಪಶುಪಾಲನಾ ಇಲಾಖೆ, ಧಾರವಾಡ ಇವರುಗಳ ಸಂಯುಕ್ತಾಶ್ರಯದಲ್ಲಿ “ವೈಜ್ಞಾನಿಕ ಹೈನುಗಾರಿಕೆ” ವಿಷಯವಾಗಿ ರೈತರಿಗೆ ಅಂತರ್ಜಾಲದ ಮುಖಾಂತರ ವೆಬಿನಾರ್ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ರಮೇಶ ಬಾಬುರವರು ಮಾತನಾಡಿ ಕೃಷಿಯ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ಹಾಗೂ ಹೈನುಗಾರಿಕೆಗೆ ಹೆಚ್ಚು ಪ್ರಾತಿನಿದ್ಯವನ್ನು ಕೊಡಬೇಕೆಂದು ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಅನಿಲಕುಮಾರ ಜಿ. ಕೆ., ಸಹಾಯಕ ಪ್ರಾಧ್ಯಾಪಕರು, ಪಶು ವಿಜ್ಞಾನ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಡಾ. ಆನಂದ ಪಡೆಪ್ಪನವರ, ಮುಖ್ಯ ಪಶು ಅಧಿಕಾರಿಗಳು, ಪಶುಪಾಲನಾ ಇಲಾಖೆ, ಮಂಗಳಗಟ್ಟಿ, ಧಾರವಾಡ, ಸಂತೋಷ ಪಾಗದ, ಮೇವಿನ ಬೆಳೆ ಬೀಜೋತ್ಪಾದಕರು ಹಾಗೂ ಯುವ ಕೃಷಿ ಉದ್ಯಮಿ ಹಾಗೂ ಡಾ. ಎಸ್. ಎ. ಬಿರಾದಾರ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೃ.ವಿ.ಕೇಂ., ಧಾರವಾಡ ಇವರುಗಳು ವೈಜ್ಞಾನಿಕ ಹೈನುಗಾರಿಕೆ, ಶುದ್ಧ ಗುಣಮಟ್ಟದ ಹಾಲು ಉತ್ಪಾದನೆ, ಹಾಲಿನ ಗುಣಲಕ್ಷಣಗಳು, ಹಾಲು ಉತ್ಪಾದನೆಯಲ್ಲಿ ಪರಿಗಣಿಸಬೇಕಾದ ಅಂಶಗಳು, ವಿವಿಧ ಮೇವಿನ ಬೆಳೆಗಳು, ಮೇವಿನಲ್ಲಿರುವ ಪೋಷಕಾಂಶಗಳು ಹಾಗೂ ಮೇವಿನ ಬೆಳೆ ಬೀಜೋತ್ಪಾದನೆ ಕುರಿತ ವಿಷಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 60ಕ್ಕೂ ಅಧಿಕ ರೈತರು, ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿ ಹೈನುಗಾರಿಕೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಸಂಪನ್ಮೂಲ ವ್ಯಕ್ತಿಗಳ ಜೊತೆ ಚರ್ಚಿಸಿದರು. ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಯಾದ ಡಾ. ಗೀತಾ ಎಸ್. ತಾಮಗಾಳೆಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು.